ಚೆನ್ನೈ:ಜುಲೈ-19:(www.justkannada.in) ತಮ್ಮದೇ ಹೋಟೆಲ್ ನೌಕರನನ್ನು ಹತ್ಯೆಗೈದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸರವಣ ಭವನ ಹೋಟೇಲ್ ಮಾಲೀಕ ದೋಸೆ ಕಿಂಗ್ ಖ್ಯಾತಿಯ ಉದ್ಯಮಿ ಪಿ.ರಾಜಗೋಪಾಲ್ (73) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೊಲೆ ಆರೋಪದಡಿ ರಾಜಗೋಪಾಲ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಅನಾರೋಗ್ಯೋ ಹಿನ್ನಲೆಯಲ್ಲಿ ಅವರನ್ನು ಮಂಗಳವಾರವಷ್ಟೇ ಸರಕಾರದ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆಂದು ವಿಜಯ್ ಹೆಲ್ತ್ ಸೆಂಟರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಹೋಟೆಲ್ ನೌಕರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 9ರಂದು ರಾಜಗೋಪಾಲ್ ಪೊಲೀಸರಿಗೆ ಶರಣಾಗಿದ್ದರು. ಪುಳಲ್ ಕೇಂದ್ರ ಕಾರಾಗೃಹ ಸೇರುತ್ತಿದ್ದಂತೆಯೇ ತೀವ್ರವಾಗಿ ಅಸ್ವಸ್ಥರಾಗಿದ್ದರು.
ಸಣ್ಣ ಕಿರಾಣಿ ಅಂಗಡಿಯಿಂದ ಬದುಕು ಆರಂಭಿಸಿದ ರಾಜಗೋಪಾಲ್ ಮುಂದೆ ‘ಸರವಣ ಭವನ’ ಸಮೂಹ ರೆಸ್ಟೋರೆಂಟ್ಗಳನ್ನು ತಮಿಳುನಾಡು ಸೇರಿ ವಿಶ್ವದ ನಾನಾ ಕಡೆ ಸ್ಥಾಪಿಸಿದ್ದರು. ಪಿ. ರಾಜಗೋಪಾಲ್ ಅವರು ತನ್ನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿನ್ಸ್ ಶಾಂತಕುಮಾರ್ ಅವರ ಪತ್ನಿಯ ಜೊತೆ ರಾಜಗೋಪಾಲ್ ಅಕ್ರಮ ಸಂಬಂಧ ಹೊಂದಿದ್ದರು. 2001ರಲ್ಲಿ ಆಕೆಯನ್ನು ಮದುವೆಯಾಗುವ ಸಲುವಾಗಿ ಪ್ರಿನ್ಸ್ ಶಾಂತಕುಮಾರ್ ಅವರನ್ನು ಕೊಲ್ಲಿಸಿದರೆನ್ನಲಾಗಿದೆ.
ಪ್ರಕರಣದಲ್ಲಿ ಸೆಷೆನ್ಸ್ ಕೋರ್ಟ್ನಿಂದ ರಾಜಗೋಪಾಲ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಕೆಳ ನ್ಯಾಯಾಲಯದ ಈ ತೀರ್ಪನ್ನು ಎತ್ತಿ ಹಿಡಿದು ಜುಲೈ 7ರೊಳಗೆ ಶಿಕ್ಷೆ ಅನುಭವಿಸಲು ಶರಣಾಗುವಂತೆ ರಾಜಗೋಪಾಲ್ಗೆ ಆದೇಶ ನೀಡಿತ್ತು. ಜುಲೈ 9ರಂದು ರಾಜಗೋಪಾಲ್ ಶಿಕ್ಷೆಗೆ ಸಿದ್ಧವಾಗಿ ಕೋರ್ಟ್ಗೆ ಶರಣಾಗಿದ್ದರು.