ನವದೆಹಲಿ, ಜುಲೈ 20, 2022 (www.justkannada.in): ಸಾವಿತ್ರಿ ಜಿಂದಾಲ್ ಅವರ ಸಂಪತ್ತು ಕಳೆದ ಎರಡು ವರ್ಷಗಳಲ್ಲಿ ಸುಮಾರು ೧೨ ಬಿಲಿಯನ್ ಡಾಲರ್ ಗಳಿಗೆ ಹೆಚ್ಚಾಗುವುದರ ಮೂಲಕ ಇದೀಗ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
೭೨ ವರ್ಷ ವಯಸ್ಸಿನ ಸಾವಿತ್ರಿ ಜಿಂದಾಲ್ ಅವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಡುವೆ ಬಹುಪಾಲು ಉದ್ದಿಮೆಗಳು ಕಷ್ಟಗಳನ್ನು ಎದುರಿಸುತ್ತಿದ್ದ ಪರಿಸ್ಥಿತಿಯ ನಡುವೆ ಸಾವಿತ್ರಿ ಅವರು ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಜಿಂದಾಲ್ ಗ್ರೂಪ್ ನ ಈ ಮಾತೃ, ಬಿಲಿಯನೇರ್ ಗಳ ಪಟ್ಟಿಯಲ್ಲಿ ೯೧ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈಕೆಯ ಪತಿ ಒ.ಪಿ. ಜಿಂದಾಲ್ ಅವರು ೨೦೦೫ರಲ್ಲಿ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಮಡಿದರು. ಆಗ ಜಿಂದಾಲ್ ಸಮೂಹ ಮಕ್ಕಳ ಪೈಕಿ ಭಾಗವಾಯಿತು.
ಸಾವಿತ್ರಿ ಜಿಂದಾಲ್ ಅವರ ಆಸ್ತಿ ಕೇವಲ ಎರಡು ವರ್ಷಗಳಲ್ಲಿ, ಅಂದರೆ ೨೦೨೦ರಲ್ಲಿ ೪.೮ ಬಿಲಿಯನ್ ಡಾಲರ್ ಗಳಿಂದ, ೨೦೨೨ರಲ್ಲಿ ೧೭.೭ ಬಿಲಿಯನ್ ಡಾಲರ್ ಗಳಿಗೆ ಹೆಚ್ಚಳವಾಗಿದೆ. ೨೦೧೯ ಹಾಗೂ ೨೦೨೦ರ ನಡುವೆ ಇವರ ಸಂಪತ್ತು ೫.೯ ಬಿಲಿಯನ್ ಡಾಲರ್‌ಗಳಿಂದ ೪.೮ ಬಿಲಿಯನ್ ಡಾಲರ್ ಗಳಿಗೆ ಇಳಿಕೆಯಾಗಿರುವುದಾಗಿ ವರದಿಯಾಗಿತ್ತು.
ಈ ಉದ್ಯಮಿಯ ಇತಿಹಾಸ ಬಹಳ ವಿಶೇಷತೆಗಳಿಂದ ಕೂಡಿದೆ. ಕಾಲೇಜು ಮೆಟ್ಟಿಲು ಹತ್ತಿರದಿದ್ದರೂ ಸಹ ಸಾವಿತ್ರಿ ಜಿಂದಾಲ್ ವಿಶ್ವದ ಅತ್ಯಂತ ಶ್ರೀಮಂತ ೧೩ ಬಿಲಿಯನೇರ್ ಗಳ ಪಟ್ಟಿಯಲ್ಲಿ ಈಕೆ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ ಈಕೆ, ಹರಿಯಾಣದಲ್ಲಿ ಭುಪಿಂದರ್ ಸಿಂಗ್ ಅವರ ಸರ್ಕಾರದಲ್ಲಿ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಜಿಂದಾಲ್ ಸಮೂಹ ಭಾರತದ ಅತೀ ದೊಡ್ಡ ಉದ್ಯಮ ಸಮೂಹವಾಗಿದೆ. ಸಾವಿತ್ರಿ ಜಿಂದಾಲ್ ಅವರ ಮಗ ಸಜ್ಜನ್ ಜಿಂದಾಲ್ ಜೆಎಸ್ ಡಬ್ಲ್ಯುಯ ಸ್ಟೀಲ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರೆ, ಮತ್ತೊಬ್ಬ ಮಗ ನವೀನ್ ಜಿಂದಾಲ್ ಅವರು ಜಿಂದಾಲ್ ಸ್ಟೀಲ್ & ಪವರ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ನೈಕಾ ಸ್ಥಾಪಕಿ ಫಲ್ಗುಣಿ ನಯರ್, ಫಾರ್ಮಾ ಕಂಪನಿ ಯುಎಸ್‌ವಿ ಪ್ರೈಲಿ.ನ ಲೀನಾ ತಿವಾರಿ ಹಾಗೂ ಕಿರಣ್ ಮುಜುಂದಾರ್ ಶಾ ಅವರು ಭಾರತದ ಬಿಲಿಯನೇರ್ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿರುವ ಇತರರಾಗಿದ್ದಾರೆ.
ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್
Key words: Savitri Jindal- India- richest -woman.