ಮೈಸೂರು,ಫೆಬ್ರವರಿ,28,2023(www.justkannada.in): ಹಗರಣಗಳ ಬಗ್ಗೆ ಪ್ರಾಯಶ್ಚಿತ ಪಡಬೇಕಾದವರು ಸಂಕಲ್ಪಯಾತ್ರೆ ಹೊರಟಿರುವುದು ನಾಡಿನ ದೊಡ್ಡ ದುರಂತ. ಯಾವ ಸಾಧನೆಗಾಗಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಟೀಕಿಸಿದ್ದಾರೆ.
ಈ ಸಂಬಂಧ ಪ್ರತ್ರಿಕಾ ಪ್ರಕಟಣೆ ಹೊರಡಿಸಿ ಬಿಜೆಪಿ ವಿರುದ್ದ ಕಿಡಿಕಾರಿತುವ ಹೆಚ್.ಎ ವೆಂಕಟೇಶ್, ವಿಧಾನಸಭೆಯ ಚುನಾವಣೆ ದೃಷ್ಟಿ ಇಟ್ಟುಕೊಂಡು ರಾಜ್ಯದ ನಾಲ್ಕು ದಿಕ್ಕುಗಳಿಂದ ಶುರುವಾಗಲಿರುವ ವಿಜಯ ಸಂಕಲ್ಪ ಯಾತ್ರೆ ಚಾಮರಾಜನಗರ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟದಿಂದ ನಾಳೆ ಚಾಲನೆಗೊಳ್ಳುತ್ತಿರುವುದನ್ನು ಜನತೆಯು ಅಪಹಾಸ್ಯದಿಂದ ನೋಡುವಂತಾಗಿದೆ. ಬಿಜೆಪಿ ಸರ್ಕಾರವು ಸಾಧನೆಗಿಂತ ಹಗರಣಗಳ ಸಂಖ್ಯೆ ಜಾಸ್ತಿ ಇದೆ. ಹಗರಣಗಳ ಬಗ್ಗೆ ಪ್ರಾಯಶ್ಚಿತ ಪಡಬೇಕಾದವರು ಸಂಕಲ್ಪ ಯಾತ್ರೆ ಹೊರಟಿರುವುದು ನಾಡಿನ ದೊಡ್ಡ ದುರಂತ. ಜನರಿಗೆ ಮಾಡಿರುವ ಸಾಧನೆಯನ್ನು ಹೇಳದೆ, ಇತ್ತೀಚೆಗೆ ಮಂಡಿಸಿರುವ ಬಜೆಟ್ ಅಶ್ವಾಸನೆ ಜನರ ಮುಂದಿಡಲು ಹೊರಟಿರುವುದು ಬಿಜೆಪಿಯವರ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಜನರು ಈಗಾಗಲೇ ಬಿಜೆಪಿಯನ್ನು ಕಿತ್ತೊಗೆಯಬೇಕೆಂಬ ಸಂಕಲ್ಪ ಮಾಡಿದ್ದಾರೆ. ಹಾಗಾಗಿ ವಿಜಯ ಸಂಕಲ್ಪ ಯಾತ್ರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಬಿಜೆಪಿಯವರು ಕರ್ನಾಟಕದ ಹಿರಿಯ ರಾಜಕೀಯ ಮುತ್ಸದಿ ಬಿ.ಎಸ್ ಯಡಿಯೂರಪ್ಪನವರ ಕಣ್ಣಲ್ಲಿ ಹತ್ತಾರು ಬಾರಿ ಕಣ್ಣೀರು ಬರುವಂತೆ ಅವಮಾನ ಅವಮಾನ ಮಾಡಿದ್ದಾರೆ. ಯಡಿಯೂರಪ್ಪನವರ ಮನಸ್ಸಿನಲ್ಲಿ ಬಿಜೆಪಿ ಇಲ್ಲ. ದೈಹಿಕವಾಗಿ ಮಾತ್ರ ಬಿಜೆಪಿಯಲ್ಲಿದ್ದಾರೆ ಎಂದು ಬಿಜೆಪಿಗೆ ಹೆಚ್.ಎ ವೆಂಕಟೇಶ್ ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳ ಪ್ರವಾಸದಲ್ಲಿ ಅವರ ಮಾತುಗಳನ್ನು ಗಮನಿಸಿದರೆ ನಿಜಕ್ಕೂ ಒಬ್ಬ ಪ್ರಧಾನಿಯಾಗಿ ತನಗೆ ಇರಬೇಕಾದ ಪ್ರಬುದ್ಧತೆಯನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳಾಗಿ ಬಿಎಸ್ ಯಡಿಯೂರಪ್ಪನವರು ರಾಜ್ಯದ ಸಮಸ್ಯೆಗಳನ್ನು ಹೊತ್ತು ದೆಹಲಿಗೆ ಪ್ರಧಾನಮಂತ್ರಿಗಳನ್ನು ನೋಡಲು ಹೋದಾಗ ಸೌಜನ್ಯ ಭೇಟಿಗೂ ಅವಕಾಶ ಕೊಡದ ನರೇಂದ್ರ ಮೋದಿ ಶಿವಮೊಗ್ಗದಲ್ಲಿ ಯಡಿಯೂರಪ್ಪನವರನ್ನು ಹಾಡಿ ಹೊಗಳಿರುವುದು ದ್ವಂದ್ವ ನೀತಿಯನ್ನು ತೋರಿಸುತ್ತದೆ.
ಯಡಿಯೂರಪ್ಪನವರು ಕಾಂಗ್ರೆಸ್ ಹಾಗೂ ಜನತಾ ಪರಿವಾರ ಪ್ರಬಲವಾಗಿದ್ದ ಕಾಲದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದವರು. ಬಿ.ಎಸ್ ಯಡಿಯೂರಪ್ಪನವರು ತಮ್ಮ ಪರಿಶ್ರಮದ ಮೂಲಕ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿದವರು. ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪನವರಷ್ಟು ಕಷ್ಟ ಪಟ್ಟವರಲ್ಲ , ಯಡಿಯೂರಪ್ಪ ಅವರಿಗೆ ಇರುವಷ್ಟು ಬದ್ಧತೆಯೂ ಇಲ್ಲ. ಈಗ ಯಡಿಯೂರಪ್ಪನವರು ಹೊಗಳುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೊರಟಿರುವುದನ್ನು ಜನತೆ ನಂಬುವುದಿಲ್ಲ. ಸೂಕ್ಷ್ಮವಾಗಿ ನರೇಂದ್ರ ಮೋದಿಯವರ ವರ್ತನೆಯನ್ನು ಗಮನಿಸಿದರೆ ತಮಗಿಂತಲೂ ಯಡಿಯೂರಪ್ಪ ರಾಜಕೀಯ ಪ್ರಾಬಲ್ಯ ಹೊಂದಿದ್ದಾರೆ ಎಂಬುದು ಪ್ರಧಾನಿಯವರಿಗೆ ತಿಳಿದಂತಿದೆ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಅವರ ಆಡಳಿತದಲ್ಲಿ ನಿರುದ್ಯೋಗಿ ಸಮಸ್ಯೆ ನಿವಾರಣೆ ಮಾಡುವ ಬದಲು ಹೆಚ್ಚಾಗಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆ ಹೆಸರಿನಲ್ಲಿ 15 ಲಕ್ಷ ರೂಪಾಯಿ ಹಣ ಇರುವ ಪ್ರಸ್ತಾಪವೇ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ನೀಡಿದ ಅಧಿಕಾರವನ್ನು ಉಪಯೋಗಿಸಿಕೊಂಡು ಜನಪರ ಕಾರ್ಯಕ್ರಮಗಳನ್ನು ನೀಡದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಬಗ್ಗೆ ಜನತೆ ನಿರಾಶೆಗೊಂಡಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ .ನಡ್ದ ಅವರ ಪ್ರವಾಸದಿಂದ ಯಾವುದೇ ಪ್ರಯೋಜನವಿಲ್ಲ. 2023ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಕಟು ಸತ್ಯ ಎಂದು ಹೆಚ್.ಎ ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಸಿಲಲ್ಲಿ ನಿಲ್ಲಿಸಿ ಅವಮಾನ ಮಾಡಿದ್ದಾರೆ ಎಂಬ ಪ್ರಧಾನಿಗಳ ಹೇಳಿಕೆ ಖಂಡನೀಯ. ಇಡೀ ದೇಶದ ಕಾಂಗ್ರೆಸ್ ಕಾರ್ಯಕರ್ತರು ಖರ್ಗೆ ಅವರನ್ನು ಅಭಿಮಾನದಿಂದ ನೋಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗಲಿದೆ . ಲೋಕಸಭೆಯಲ್ಲಿ ಖರ್ಗೆ ಅವರನ್ನು ಎದುರಿಸಲಾರದೆ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿಯವರು ಮಾಡಿದ ಕುತಂತ್ರವನ್ನು ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಮರೆಯುವುದಿಲ್ಲ. ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಮೋದಿಯವರಿಗಿಲ್ಲ ಎಂದು ಕಿಡಿಕಾರಿದರು.
Key words: scandals –bjp-Sankalpa yatra-KPCC spokesperson -HA Venkatesh.