ಮೈಸೂರು,ಮಾರ್ಚ್,22,2021(www.justkannada.in) : ಸಂಶೋಧಕರು ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಂಶೋಧನೆಯ ಮೌಲ್ಯ ಹೆಚ್ಚಿಸಬೇಕು. ಈ ಉದ್ದೇಶದಿಂದ ವಿವಿಯ ವತಿಯಿಂದ ಸಂಶೋಧಕರಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊಘಿ.ಜಿ.ಹೇಮಂತ್ ಕುಮಾರ್ ಹೇಳಿದರು.ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾನಿಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಹಾಗೂ ಸಿ.ಪಿ.ಡಿ.ಪಿ.ಎಸ್ ಸಹಯೋಗದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧಕರು ಖಾಯಂ ನೋಂದಣಿಯಾಗಿ ಶಿಷ್ಯವೇತನ ಪಡೆಯುತ್ತಿರುವ ಪಿಎಚ್.ಡಿ.ಸಂಶೋಧಕರುಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕುಲಪತಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಿಂತಲೂ ಮುಂಚಿನಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಬೇಡಿಕೆಯಿತ್ತು. ವಿದ್ಯಾರ್ಥಿಗಳ ಅನುಕೂಲದ ದೃಷ್ಠಿಯಿಂದ ಸರಕಾರಕ್ಕೆ ಸುಮಾರು 22 ಬಾರಿ ಪ್ರಸ್ತಾವನೆ ಮೂಲಕ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ವಿದ್ಯಾರ್ಥಿಗಳ ಶುಲ್ಕದಿಂದಲೇ ವಿವಿಯಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗುತ್ತಿದೆ ಎಂದರು.
ಕೊರೊನಾ ಲಾಕ್ಡೌನ್ ಸಂದರ್ಭ ಸಂಶೋಧಕರ ಅಧ್ಯಯನಕ್ಕೆ ಸಮಸ್ಯೆಯಾಗಿದೆ. ಹಿಂದೆ ಸಂಶೋಧಕರಿಗೆ ಪುಸ್ತಕಗಳೇ ಆಧಾರ. ಸಂಶೋಧನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗೆ ಗ್ರಂಥಾಲಯಕ್ಕೆ ತೆರಳಿ ಪುಸ್ತಕಗಳ ಅಧ್ಯಯನ ಮಾಡಬೇಕಿತ್ತು. ಆದರೆ, ಇಂದು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿರುವುದರಿಂದ ಸಂಶೋಧಕರಿಗೆ ಲ್ಯಾಪ್ಟಾಪ್ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಸೋಸಲೆ ಮಹೇಶ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರವು ಎಸ್ಇಪಿ,ಟಿಎಸ್ಪಿ ಯೋಜನೆಯಡಿ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದೆ. 2015-16ನೇ ಸಾಲಿನ ಎಸ್ಸಿ, ಎಸ್ಟಿ ಪದವಿ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಜಾರಿಯಾದರೂ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿರಲಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಸಂಶೋಧನಾ ವಿದ್ಯಾರ್ಥಿಗಳ ಹೋರಾಟದಿಂದಾಗಿ ಸರಕಾರ ನೀಡದಿದ್ದರೂ, ವಿವಿಯಿಂದ ಸಂಶೋಧಕರಿಗೆ ನೆರವಾಗುವ ನಿಟ್ಟಿನಲ್ಲಿ ಲ್ಯಾಪ್ಟಾಪ್ ವಿತರಿಸುತ್ತಿರುವುದು ಸಂತೋಷದ ವಿಷಯ. ಈ ಕಾರ್ಯ ಹೀಗೆ, ಪ್ರತಿವರ್ಷ ಮುಂದುವರಿಯಲಿ ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಹಣಕಾಸು ಅಧಿಕಾರಿ ಪ್ರೊ.ಟಿ.ದೇವರಾಜ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ನಿರ್ದೇಶಕ ಡಾ.ಎಸ್.ಟಿ.ರಾಮಚಂದ್ರ, ಆಡಳಿತಾಧಿಕಾರಿ ಪ್ರೊ.ಪಿ.ಮಾದೇಶ, ಕುಲಪತಿಗಳ ವಿಶೇಷಾಧಿಕಾರಿ ಡಾ.ಎಚ್.ಕೆ.ಚೇತನ್, ಪ.ಜಾತಿ ಮತ್ತು ಪ.ಪಂಗಡದ ವಿಶೇಷ ಘಟಕ ಉಪಕುಲಸಚಿವ ಪ್ರೊ.ಎಸ್.ಮಹದೇವಮೂರ್ತಿ, ಸಿ.ಪಿ.ಡಿ.ಪಿ.ಎಸ್ ನಿರ್ದೇಶಕ ಪ್ರೊ.ಎಸ್.ಜೆ.ಮಂಜುನಾಥ್ ಇತರರು ಉಪಸ್ಥಿತರಿದ್ದರು.
key words : Scheduled Caste-Scheduled Tribe-Researchers-Lap Top-Chancellor- Prof.G.Hemant Kumar-Distribution