ಮೈಸೂರು, ಸೆ.17, 2019 : (www.justkannada.in news ) : ವಿದ್ಯಾರ್ಥಿಗಳಿಗೆ ಪಠ್ಯದ ಜತೆಜತೆಗೆ ಪಠ್ಯೇತರ ವಿಷಯಗಳಲ್ಲಿ ಅದರಲ್ಲೂ ಕೃಷಿಗೆ ಸಂಬಂಧಿಸಿದ ಜ್ಞಾನದ ಬಗ್ಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆಯೂ ಆಗಿರುವ ಡಾ.ಪುಷ್ಪ, ಜೀವ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ. ಜತೆಗೆ ಯಂಗ್ ಸೈಟಿಸ್ಟ್ ಪ್ರಶಸ್ತಿಗೂ ಭಾಜನರಾದವರು. ತಮ್ಮ ವಿನೂತನ ಯೋಜನೆಗಳ ಮೂಲಕ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಿರುವ ಯುವ ರಾಜಕಾರಣಿ. ಪ್ರಸಕ್ತ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಡಾ.ಪುಷ್ಪ ಅಮರನಾಥ್ ಹೇಳಿದಿಷ್ಟು….
ಶಾಲಾ ಹಂತದಲ್ಲೇ ಮಕ್ಕಳಿಗೆ ಕೃಷಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ತರಗತಿಯಲ್ಲಿ ಕಲಿಯುವ ಪಾಠಕ್ಕಿಂತ ಜಮೀನಿನಲ್ಲಿ ಕಲಿಯುವ ಅನುಭವವೇ ದೊಡ್ಡದು. ಭತ್ತದ ನಾಟಿ ಮಾಡುವುದರಿಂದ ಹಿಡಿದು ಬೆಳೆಯ ಸಂಪೂರ್ಣ ನಿರ್ಹವಣೆ ಬಗೆಗೆ ಸ್ವಯಂ ಅನುಭವ ಹೊಂದುವಂತಾಗಬೇಕು.
ಈಗಾಗಲೇ ಶನಿವಾರದಂದು ಶಾಲಾ ಮಕ್ಕಳಿಗೆ ‘ಬ್ಯಾಗ್ ರಹಿತ ‘ ದಿನವನ್ನಾಗಿ ಮಾಡಿರುವಂತೆ, ಅದೇ ದಿನ ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಕೃಷಿ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು. ಜತೆಗೆ ಪಠ್ಯದಲ್ಲೂ ಕೃಷಿ ಬಗ್ಗೆ ಅರಿವು ಮೂಡಿಸುವ ಪಾಠಗಳನ್ನು ಅಳವಡಿಸಬೇಕು ಎಂದರು.
ಪಠ್ಯದಲ್ಲಿ ಕೃಷಿ ಜಾಗೃತಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡಾ.ಪುಷ್ಪ ಅಮರನಾಥ್ ಅವರು ಸಾರ್ವಜನಿಕರ ಅಭಿಪ್ರಾಯಕ್ಕೆ ಮುಂದಾಗಿದ್ದಾರೆ. ಆಸಕ್ತರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಹುದು.
key words : school-aggriculture-kpcc-women-president-pushpa-amarnath