ಬೆಂಗಳೂರು,ಮಾರ್ಚ್,28,2025 (www.justkannada.in): ಶಾಲೆಗಳಲ್ಲಿ ಕೆಲವು ದಿನಗಳಲ್ಲಿ ಬೇಸಿಗೆ ರಜೆಯ ಪ್ರಾರಂಭವಾಗಲಿದ್ದು ಈ ಮಧ್ಯೆ ಶಾಲಾ ಮಕ್ಕಳ ಬಿಸಿಯೂಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶವೊಂದನ್ನ ಹೊರಡಿಸಿದ್ದು ಈ ಆದೇಶ ಇದೀಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು, ಶಾಲೆಗಳಲ್ಲಿ ಬಿಸಿಯೂಟ ಮಾಡುವ ಅಡುಗೆ ತಯಾರಕರು, ಸಹಾಯಕರನ್ನ ಮಾರ್ಚ್ 31ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಏಪ್ರಿಲ್ 10ರವರೆಗೂ ಶಾಲೆಗಳನ್ನ ನಡೆಸಬೇಕು. ಮಕ್ಕಳಿಗೆ ಬಿಸಿಯೂಟ ಮೊಟ್ಟೆ ಹಾಲು ಕೊಡಬೇಕು ಎಂದು ಸರ್ಕಾರ ಸೂಚಿಸಿದೆ. ಈ ನಡುವೆ ಬಿಸಿಯೂಟ ಅಡುಗೆ ತಯಾರಕರು, ಸಹಾಯಕರನ್ನ ಮಾರ್ಚ್ 31ಕ್ಕೆ ಬಿಡುಗಡೆಗೊಳಿದರೇ ಏಪ್ರಿಲ್ 10ರವರೆಗೂ ಮಕ್ಕಳಿಗೆ ಬಿಸಿಯೂಟ ಯಾರು ತಯಾರು ಮಾಡುತ್ತಾರೆ ಎಂಬ ಪ್ರಶ್ನೆ ಉದ್ಬವಿಸಿದೆ.
ಅಡುಗೆ ತಯಾರಕರು ಸಹಾಯಕರನ್ನ ಬಿಡುಗಡೆ ಮಾಡಲು ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, 2024-25 ನೇ ಸಾಲಿನ ಪಿಎಂ ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಜೂನ್-204 ಮಾಹೆಯಿಂದ ಮಾರ್ಚ್-2025 ರ ಮಾಹೆಯವರೆಗೆ ಒಟ್ಟು 10 ತಿಂಗಳ ಅವಧಿಗೆ ಯೋಜನೆಯನ್ನು ನಡೆಸಲು ಅನುಮೋದನೆ ನೀಡಿರುತ್ತದೆ. ಸದರಿ ಅವಧಿಗೆ ಸರ್ಕಾರಿ/ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಅಡುಗೆ ತಯಾರಿಸಿ ವಿತರಿಸುವ ಕೆಲಸಕ್ಕೆ ತಾತ್ಕಾಲಿಕವಾಗಿ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆದುಕೊಂಡಿದ್ದು, ಈ ಅವಧಿಗೆ ಮಾಸಿಕ ಗೌರವ ಸಂಭಾವನೆಯನ್ನು ವಿತರಿಸಲಾಗಿದೆ.
2024-25ನೇ ಸಾಲಿನಲ್ಲಿ ಯೋಜನೆಯ ಅವಧಿ 31ನೇ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ, ಯೋಜನೆಯಡಿ ತಾತ್ಕಾಲಿಕವಾಗಿ ಸೇವೆ ನಿರ್ವಹಿಸಿದ ಅಡುಗೆ ಸಿಬ್ಬಂದಿಯನ್ನು ದಿನಾಂಕ: 31.3.2025ರಂದು ಬಿಡುಗಡೆಗೊಳಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಲು ತಿಳಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಆದರೆ ಶಾಲೆಗಳು ಏಪ್ರಿಲ್ 10ರವರೆಗೂ ತೆರೆದಿರುತ್ತವೆ. ಜೊತೆಗೆ ಮಕ್ಕಳಿಗೆ ಬಿಸಿಯೂಟ ಮೊಟ್ಟೆ ಹಾಲು ವಿತರಿಸಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ ಇದೀಗ ಮಾರ್ಚ್ 31ಕ್ಕೆ ಬಿಸಿಯೂಟ ಅಡುಗೆ ತಯಾರಕರು, ಸಹಾಯಕರನ್ನ ಬಿಡುಗಡೆಗೊಳಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಸಾಕಷ್ಟು ಗೊಂದಲವನ್ನುಂಟು ಮಾಡಿದೆ.
Key words: School, bisiyuta, Government order, confusion