ಬೆಂಗಳೂರು,ಅಕ್ಟೋಬರ್,1,2020(www.justkannada.in): ರಾಜ್ಯದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭ ಮಾಡುವ ಬಗ್ಗೆ ಶೀಘ್ರದಲ್ಲೇ ಸ್ಪಷ್ಟ ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿ ಯುಜಿಸಿ ಈಗಾಗಲೇ ಮಾರ್ಗಸೂಚಿಯನ್ನು ನೀಡಿದೆ. ಅದರಂತೆ ಸರಕಾರ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಅವರ ಜತೆಗೂ ಚರ್ಚೆ ನಡೆಸಿದ ನಂತರ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಅದರ ಮುಂದುವರೆದ ಭಾಗವಾಗಿ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಎಂದಿನಿಂದ ಹಾಜರಾಗಬೇಕು ಎಂಬ ಬಗ್ಗೆ ಸಂಬಂಧಿತರ ಜತೆ ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಉತ್ತರ ನೀಡಿದರು.
ಕೋವಿಡ್ ಮಾರ್ಗಸೂಚಿಯ ಪ್ರಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಅವೆಲ್ಲವುಗಳ ಸಾಧಕ- ಬಾಧಕಗಳನ್ನು ನೋಡಿಕೊಂಡೇ ತರಗತಿಗಳನ್ನು ಆರಂಭ ಮಾಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ತಿಳಿಸಿದರು.
Key words: School- College- Commencement- Issue-Soon -clear information-DCM- Ashwath Narayan.