ಶಾಲಾ ಪ್ರಯಾಣ; ಪೋಷಕರು ಹೈರಾಣ

ಬೆಂಗಳೂರು:ಮೇ-26: ಪ್ರವಾಸಕ್ಕೆ ಬುಕ್‌ ಮಾಡುವ ಹವಾನಿಯಂತ್ರಿತ ವಾಹನಗಳ ಪ್ರಯಾಣ ದರವೇ ಒಂದು ಕಿ.ಮೀ.ಗೆ ಅಬ್ಬಬ್ಟಾ ಎಂದರೆ 12-15 ರೂ. ಇದೆ. ಆದರೆ, ಚಿಕ್ಕ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳ ಪ್ರಯಾಣ ದರ ಪ್ರತಿ ಕಿ.ಮೀ.ಗೆ ಎಷ್ಟು ಗೊತ್ತೇ? ಸರಿಸುಮಾರು 70ರಿಂದ 80 ರೂ. ಇದು ಆಟೋದ ಕನಿಷ್ಠ ಬಾಡಿಗೆಗಿಂತ ಮೂರುಪಟ್ಟು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ನಗರದ ಐಟಿ ಕಂಪನಿಗಳಿಗೆ ನೀಡಲಾಗುವ ವಾಹನಗಳ ಬಾಡಿಗೆಗಿಂತಲೂ ದುಪ್ಪಟ್ಟಾಗುತ್ತದೆ!

ನಗರದಲ್ಲಿ ಮಕ್ಕಳಿಗೆ ಸಾರಿಗೆ ಸೇವೆ ಕಲ್ಪಿಸುವ ನೆಪದಲ್ಲಿ ಶಾಲೆಗಳು ಮತ್ತು ಶಾಲಾ ವಾಹನಗಳ ಮಾಲೀಕರು ಅಕ್ಷರಶಃ ಸುಲಿಗೆ ಮಾಡುತ್ತಿದ್ದು, ಇದರಿಂದ ಪ್ರತಿ ವರ್ಷ ಕೋಟ್ಯಂತರ ರೂ. ಸಂಗ್ರಹ ಆಗುತ್ತಿದ್ದು, ಲಕ್ಷಾಂತರ ಪೋಷಕರು ಶೋಷಣೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಅರಿವಿದ್ದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಸಹಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ವಾಹನಗಳಿಗೆ ನಿರ್ದಿಷ್ಟ ದರ ನಿಗದಿಪಡಿಸಬೇಕು ಎಂಬ ಕೂಗು ಪೋಷಕರಿಂದ ಕೇಳಿಬರುತ್ತಿದೆ.

ನಗರದಲ್ಲಿ ಸುಮಾರು ಹತ್ತು ಸಾವಿರ ಖಾಸಗಿ ಮತ್ತು ಅನುದಾನಿತ ಶಾಲೆಗಳಿವೆ. ಈ ಪೈಕಿ ಒಂದೊಂದು ಶಾಲೆ ಒಂದೊಂದು ರೀತಿ ಸಾರಿಗೆ ಶುಲ್ಕ ವಿಧಿಸುತ್ತಿದ್ದು, ವಾರ್ಷಿಕ ಕನಿಷ್ಠ 25 ಸಾವಿರದಿಂದ ಗರಿಷ್ಠ 45 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಆದರೆ, ಬಹುತೇಕ ಮಕ್ಕಳು ಶಾಲೆಯಿಂದ 5 ಕಿ.ಮೀ. ವ್ಯಾಪ್ತಿಯೊಳಗೇ ಇರುತ್ತಾರೆ. ಕನಿಷ್ಠ ದರವನ್ನೇ ಲೆಕ್ಕಹಾಕಿದರೂ ವಾಹನದ ಚಾಲಕ ಮತ್ತು ಸಹಾಯಕಿಯ ಮಾಸಿಕ ವೇತನ ಹಾಗೂ ಡೀಸೆಲ್‌ ದರವನ್ನೂ ಕಡಿದು, ಕಿ.ಮೀ.ಗೆ 70ರಿಂದ 80 ರೂ. ಆಗುತ್ತದೆ. ಐಟಿ ಕಂಪನಿಗಳಿಗೆ ನೀಡಲಾಗುವ ವಾಹನಗಳ ಬಾಡಿಗೆಯೇ ಕಿ.ಮೀ.ಗೆ 38ರಿಂದ 40 ರೂ. ಇದೆ!

ಇನ್ನು ಆ್ಯಪ್‌ ಆಧಾರಿತ ವಾಹನಗಳು, ಆಟೋ ದರಗಳಿಗೆ ಹೋಲಿಸಿದರೆ ಇದು ಮೂರುಪ್ಪಟ್ಟಾಗುತ್ತದೆ. ಆದರೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅನಿವಾರ್ಯವಾಗಿ ಶಾಲಾ ವಾಹನ ಸೇವೆ ಪಡೆಯಲಾಗುತ್ತದೆ. ತಮ್ಮ ಈ ಅಸಹಾಯಕತೆಯನ್ನು ಅಕ್ಷರಶಃ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಪೋಷಕರು ಆರೋಪಿಸುತ್ತಾರೆ.

ಈಚೆಗೆ ಈ ಸಂಬಂಧ ಸಾರಿಗೆ ಇಲಾಖೆ ಆಯುಕ್ತ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಶಿಕ್ಷಣ ಇಲಾಖೆ ಆಯುಕ್ತರನ್ನೂ ಭೇಟಿಯಾದ ವಿವಿಧ ಶಾಲೆಗಳ ಪೋಷಕರ ತಂಡ, ಆಟೋ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೆ ನಿಗದಿಪಡಿಸಿರುವಂತೆ ಶಾಲಾ ವಾಹನಗಳಿಗೂ ವೈಜ್ಞಾನಿಕ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೇರೆ ರಾಜ್ಯಗಳು ಮಾದರಿ ಆಗಲಿ: “ಉದಯವಾಣಿ’ಯೊಂದಿಗೆ ಮಾತನಾಡಿದ ಪೋಷಕರ ತಂಡದ ಪದನ್‌ ಕುಮಾರ್‌ ಜೈನ್‌, “ಜಾರ್ಖಂಡ್‌ನ‌ ರಾಂಚಿಯಲ್ಲಿ ಶಾಲಾ ವಾಹನಗಳಿಗೆ ಸರ್ಕಾರವೇ ದರ ನಿಗದಿಪಡಿಸಿದೆ. ಐದು ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ನೀಡುವ ವಾಹನಗಳಿಗೆ 710 ರೂ. ಹಾಗೂ 5-10 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ಶಾಲಾ ವಾಹನಗಳಿಗೆ 850 ರೂ. ಹಾಗೂ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿದ್ದರೆ 985 ರೂ. ಮತ್ತು 15 ಕಿ.ಮೀ. ಮೇಲ್ಪಟ್ಟಿದ್ದರೆ 1,050 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪಂಜಾಬ್‌, ಹಿಮಾಚಲ ಪ್ರದೇಶ, ಚಂಡಿಗಢದಲ್ಲಿ ಕೂಡ ಇದೇ ವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಮಾತ್ರ ಬೇಕಾಬಿಟ್ಟಿ ವಸೂಲಿ ಮಾಡಲಾಗುತ್ತಿದೆ’ ಎಂದು ದೂರಿದರು. “ತಜ್ಞರ ತಂಡ ರಚಿಸಿ, ನಗರದಲ್ಲಿಯೂ ಶಾಲಾ ವಾಹನಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಲಿ. ಬೇಕಿದ್ದರೆ ಆ ತಂಡವು 25 ಸಾವಿರ ರೂಪಾಯಿಯೇ ಆಗುತ್ತದೆ ಎಂದಾದರೆ, ಅದನ್ನು ಸರ್ಕಾರ ಜಾರಿಗೊಳಿಸಿದಲ್ಲಿ ಆ ಶುಲ್ಕ ಪಾವತಿಸಲಿಕ್ಕೂ ನಾವು ಸಿದ್ಧ’ ಎಂದೂ ಪೋಷಕರು ಒತ್ತಾಯಿಸಿದರು.

ಪೋಷಕರಿಗೆ ಕಿರುಕುಳ: ಕೆಲವು ಶಾಲಾ ಆಡಳಿತ ಮಂಡಳಿಗಳು ಸಾರಿಗೆ ಸೇವೆಗಾಗಿ ವಾಹನಗಳ ಪೂರೈಸುವ ಸಂಬಂಧ ಹೊರಗುತ್ತಿಗೆ ನೀಡಿವೆ. ಹೀಗೆ ಹೊರಗುತ್ತಿಗೆ ಪಡೆದ ಟ್ರಾವೆಲ್‌ ಕಂಪನಿಗಳ ಮಾಲಿಕರು, ಶುಲ್ಕ ಪಾವತಿಸುವಲ್ಲಿ ವಿಳಂಬವಾದರೆ, ಅಂತಹ ಪೋಷಕರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮಾನಸಿಕ ಕಿರುಕುಳ ನೀಡುತ್ತಾರೆ ಎಂದೂ ಪೋಷಕರು ಆರೋಪಿಸಿದರು.

ಅಲ್ಲದೆ, ಹೊರಗುತ್ತಿಗೆ ಪಡೆದ ಟ್ರಾವೆಲ್‌ ಕಂಪನಿಗಳು ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದಾರೆ. ಆ ಗ್ರೂಪ್‌ಗ್ಳಲ್ಲಿಯೂ ಸಾರಿಗೆ ಶುಲ್ಕ ಪಾವತಿಸದ ಪೋಷಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳಿವೆ. “ಮೊದಲು ವಾಹನ ಶುಲ್ಕ ಪಾವತಿಸಿ, ನಂತರ ಮಾತನಾಡಿ’ ಎಂದು ಬೈಯುತ್ತಾರೆ. ಆದರೆ, ವಾಸ್ತವವಾಗಿ ಈ ಟ್ರಾವೆಲ್‌ ಕಪನಿಗಳ ಮಾಲಿಕರಿಗೆ ಹೀಗೆ ಪೋಷಕರನ್ನು ನೇರವಾಗಿ ಶುಲ್ಕ ಪಾವತಿಸುವಂತೆ ಕೇಳುವಂತೆಯೇ ಇಲ್ಲ ಎಂದು ಪದನ್‌ ಕುಮಾರ್‌ ಜೈನ್‌ ದೂರಿದರು.

ವಾಹನಗಳ ಲೆಕ್ಕವೇ ಇಲ್ಲ: ನಗರದಲ್ಲಿ ಮಕ್ಕಳನ್ನು ಕೊಂಡೊಯ್ಯುವ ವಾಹನಗಳ ಲೆಕ್ಕವೇ ಇಲ್ಲ. ಶಿಕ್ಷಣ ಸಂಸ್ಥೆಯ ವಾಹನಗಳು ಎಂದು ನೋಂದಣಿಯಾದ ಬಸ್‌ಗಳ ಸಂಖ್ಯೆ ಸುಮಾರು 12 ಸಾವಿರ. ಆದರೆ, ಇವುಗಳನ್ನು ಹೊರತುಪಡಿಸಿ, ನೇರವಾಗಿ ಆಯಾ ಪ್ರದೇಶಗಳಿಂದಲೇ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಎಷ್ಟಿವೆ ಎಂಬ ನಿಖರ ಮಾಹಿತಿ ಸಾರಿಗೆ ಇಲಾಖೆ ಬಳಿ ಇಲ್ಲ. ಈ ವಾಹನಗಳು ಸಾಮಾನ್ಯವಾಗಿ ಇತರೆ ವಾಹನಗಳಂತೆಯೇ ಪರ್ಮಿಟ್‌ ಹೊಂದಿರುತ್ತವೆ.

ಆಟೋ, ವ್ಯಾನ್‌, ಮ್ಯಾಕ್ಸಿಕ್ಯಾಬ್‌, ಟೆಂಪೋ ಟ್ರಾವೆಲರ್‌, ಬಸ್‌ಗಳಲ್ಲಿ ಮಕ್ಕಳನ್ನು ಕರೆದೊಯ್ಯಲಾಗುತ್ತದೆ. ಇವೆಲ್ಲವೂ ಲಘು ಮೋಟಾರು ವಾಹನಗಳ ವ್ಯಾಪ್ತಿಗೆ ಬರುತ್ತವೆ. ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ ಇವುಗಳ ಸಂಖ್ಯೆ 70 ಸಾವಿರಕ್ಕೂ ಅಧಿಕ ಎನ್ನಲಾಗಿದೆ.
ಕೆಲವೆಡೆ ನಕಲಿ ನಂಬರ್‌ನಲ್ಲೂ ವಾಹನಗಳು ಕಾರ್ಯಾಚರಣೆ ಮಾಡುತ್ತಿವೆ. ಅಲ್ಲದೆ, ನೂರಾರು ವಾಹನಗಳು ಸಾರಿಗೆ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನೂ ಅನುಸರಿಸುತ್ತಿಲ್ಲ. ಅಂತಹ ವಾಹನಗಳನ್ನು ಪತ್ತೆಹಚ್ಚುವುದು ಕೂಡ ಕಷ್ಟ. ಸಾಮಾನ್ಯವಾಗಿ ಸಾರಿಗೆ ಇಲಾಖೆಯಿಂದ ಕಾರ್ಯಾಚರಣೆ ಕೈಗೆತ್ತಿಕೊಂಡಾಗ ಸಿಕ್ಕಿಬೀಳುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ಇದೆ.

ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ (ಡಿಸ್ಟ್ರಿಕ್ಟ್ ಎಜುಕೇಷನ್‌ ರೆಗ್ಯುಲೇಟರಿ ಅಥಾರಿಟಿ) ಎದುರು ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಲಾಗುತ್ತದೆ. ಶಾಲಾ ವಾಹನಗಳಿಗೆ ಬೇಕಾಬಿಟ್ಟಿ ದರ ನಿಗದಿಪಡಿಸುತ್ತಿರುವ ವಿಷಯ ಪ್ರಾಧಿಕಾರದ ಮುಂದೆ ಬಂದಿಲ್ಲ. ಹಾಗೊಂದು ವೇಳೆ ಗಮನಕ್ಕೆ ಬಂದರೆ, ವಿಚಾರಣೆ ನಡೆಸಿ ಸಾರಿಗೆ ಇಲಾಖೆ ಜತೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ.
-ವಿಜಯ್‌ ಶಂಕರ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ
ಕೃಪೆ:ಉದಯವಾಣಿ

ಶಾಲಾ ಪ್ರಯಾಣ; ಪೋಷಕರು ಹೈರಾಣ
school-journey-parents-are-unhappy