ಬೆಂಗಳೂರು,ಡಿಸೆಂಬರ್, 19,2020(www.justkannada.in): ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಯೋಜನೆಯಡಿ ತರಗತಿ ಪ್ರಾರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಈ ಸಂಬಂಧ ಶಾಲಾರಂಭಕ್ಕೆ ಗೈಡ್ ಲೈನ್ಸ್ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್-19 ಸೋಂಕಿನ ಲಕ್ಷಣ ಇಲ್ಲದಿರುವ ಕುರಿತು ದೃಢೀಕರಣ ನೀಡಬೇಕಿದೆ ಎಂದು ಸೂಚಿಸಿದ್ದಾರೆ.
ಈ ಸಂಬಂಧ ಸರಣಿ ಟ್ವಿಟ್ ಮಾಡಿರುವ ಸಚಿವ ಸುಧಾಕರ್, ಕೋವಿಡ್ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಮುಚ್ಚಲಾಗಿರುವ ಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ @BSYBJP ಅವರ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಸುರಕ್ಷತೆ ಎರಡನ್ನೂ ಗಮನದಲ್ಲಿಟ್ಟುಕೊಂಡು, ತಜ್ಞರ ಅಭಿಪ್ರಾಯ ಪರಿಗಣಿಸಿ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
2021ರ ಜನವರಿ 1 ರಿಂದ ರಾಜ್ಯದಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಹಾಗೂ 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, 15 ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಇತರ ತರಗತಿಗಳನ್ನು ಪ್ರಾರಂಭಿಸುವ ಕುರಿತು ನಿರ್ಣಯಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಹಾಗೆಯೇ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು, ಪ್ರವೇಶ ಪಡೆಯುವ 72 ಗಂಟೆಗಳ ಅಂತರದಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿ, ಸೋಂಕು ಇಲ್ಲದಿರುವ ಬಗ್ಗೆ ವರದಿ ಸಲ್ಲಿಸಬೇಕು. ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ ಮತ್ತು ಮನೆಯಿಂದಲೇ ಯುಟ್ಯೂಬ್ ಮತ್ತು ಇತರ ಆನ್ಲೈನ್ ಮಾಧ್ಯಮಗಳಿಂದ ಅಭ್ಯಾಸ ಮಾಡಬಹುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅರ್ಧ ದಿನ ಮಾತ್ರ ತರಗತಿ ಇರಲಿದ್ದು, ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ವಾರಕ್ಕೆ ಎರಡು ಬಾರಿ ಶಾಲೆಗೆ ಹಾಜರಾಗಬೇಕು. ಭೌತಿಕ ಅಂತರ ಕಾಪಾಡಲು ಒಂದು ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿರುವಂತೆ ವ್ಯವಸ್ಥೆ ರೂಪಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಬಿಸಿಯೂಟ ವಿತರಣೆ ಸದ್ಯಕ್ಕೆ ಆರಂಭವಾಗುವುದಿಲ್ಲ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಸಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿಬೇಕೆಂದು ಶಾಲೆ-ಕಾಲೇಜುಗಳ ಆಡಳಿತ ಮಂಡಳಿಯವರಿಗೆ, ಪೋಷಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿ ಮಿತ್ರರಿಗೆ ಮನವಿ ಮಾಡುತ್ತೇನೆ ಎಂದು ಸುಧಾಕರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
Key words: School -opening – Jan. 1- Covid test -compulsory – parental permission-minister- sudhakar