ಬೆಂಗಳೂರು:ಜೂ-18: ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ವೈಜ್ಞಾನಿಕ ಕ್ರಮ ಅನುಸರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರೂಪಿಸಿರುವ ಕರಡು ನೀತಿ ಹಾಜರುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ, ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್ ಸಲ್ಲಿಸಿರುವ ಪ್ರಮಾಣಪತ್ರವನ್ನು ಸರ್ಕಾರಿ ವಕೀಲರು ಕೋರ್ಟ್ಗೆ ಸಲ್ಲಿಸಿ, ಒಟ್ಟು 70,116 ವಿದ್ಯಾರ್ಥಿಗಳು ಶಾಲೆಯಿಂದ ಹೊರಗಳಿದಿದ್ದಾರೆಂದು ಮಾಹಿತಿ ನೀಡಿದರು. ಯಾವ ಮಾನದಂಡ ಆಧರಿಸಿ ಶಾಲೆಯಿಂದ ಹೊರಗುಳಿರುವ ಮಕ್ಕಳನ್ನು ಗುರುತಿಸಲಾಗಿದೆ? ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ಸರ್ಕಾರಿ ವಕೀಲರು, ಪರಿಶೀಲಿಸಿ ಮಾಹಿತಿ ನೀಡಲಾಗುವುದು. ಹತ್ತು ದಿನ ಕಾಲಾವಕಾಶ ನೀಡಿ ಎಂದು ಕೋರಿದರು.
ಇದಕ್ಕೆ ಬೇಸರ ವ್ಯಕ್ತಪಡಿಸಿದ ಪೀಠ, ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು. ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರೂಪಿಸಿರುವ ಕರುಡು ನೀತಿಯನ್ನು ಕೋರ್ಟ್ಗೆ ಹಾಜರುಪಡಿಸಿಲ್ಲ. ಸಮಿತಿಯ ನೀತಿ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳೇನು ಎಂಬುದರ ಬಗ್ಗೆ ಪ್ರಮಾಣಪತ್ರದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಕರಡು ನೀತಿಯನ್ನು ಜು. 12ರೊಳಗೆ ಸಲ್ಲಿಸಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಕೃಪೆ:ವಿಜಯವಾಣಿ