ಆ.23 ರಿಂದ ಶಾಲೆಗಳು ಆರಂಭ: ರಾಜ್ಯ ಸರ್ಕಾರದಿಂದ ಗೈಡ್ ಲೈನ್ ಬಿಡುಗಡೆ.

ಬೆಂಗಳೂರು,ಆಗಸ್ಟ್,16,2021(www.justkannada.in):  ಕೊರೋನಾ 3ನೇ ಅಲೆ ಭೀತಿ ನಡುವೆ ಆಗಸ್ಟ್ 23ರಿಂದ ರಾಜ್ಯದಲ್ಲಿ ಶಾಲೆಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಈ ಸಂಬಂಧ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಡ ಶಾಲೆಗಳಲ್ಲಿನ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಬೋಧನಾ ತರಗತಿಗಳನ್ನು ನಡೆಸಲು, ಶಿಕ್ಷಣ ಇಲಾಖೆ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ  ಮಾಡಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9ನೇ ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸಲಾಗುವುದು. ಪ್ರತಿ ದಿನ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿ ನಡೆಯಲಿದೆ. 1 ರಿಂದ 8ನೇ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ನಂತ್ರ ನಿರ್ಧರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ.

ಕೋವಿಡ್-19ರ ಸೋಂಕಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ 1 ರಿಂದ 10ನೇ ತರಗತಿಗಳಿಗೆ ಪರ್ಯಾಯ ವಿಧಾನದಲ್ಲಿ ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಗಳನ್ನು ಮುಂದುವರೆಸಲು ತಿಳಸಲಾಗಿದೆ.

23-08-2021ರಿಂದ ಕೋವಿಡ್-19ರ ಸೋಂಕಿನ ಪ್ರಮಾಣ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 9 ಮತ್ತು 10ನೇ ತರಗತಿ ಪ್ರಾರಂಭಕ್ಕೆ ಕೆಳಗಿನಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಶೇ.2ಕ್ಕಿಂತ ಕಡಿಮೆ ಸೋಂಕಿನ ಪ್ರಮಾಣ ಇರುವ ಜಿಲ್ಲೆಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ದಿನಾಂಕ 23-08-2021ರಿಂದ ಪ್ರತಿ ದಿನ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿಗಳನ್ನು ನಡೆಸುವುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ 1.30ರವರೆಗೆ ಶನಿವಾರ ಬೆಳಿಗ್ಗೆ 10ರಿಂದ 12.30ರವರೆಗೆ ಶಾಲೆ ನಡೆಯಲಿದೆ.

ಶಾಲೆ ಪ್ರಾರಂಭಿಸಲು ನಿಗಧಿಪಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

ಮಕ್ಕಳು ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ಮಗುವಿಗೆ ಕೋವಿಡ್-19 ಸೋಂಕಿನ ಯಾವುದೇ ಲಕ್ಷಣಗಳಿರುವುದಿಲ್ಲ ಎಂದು ದೃಢೀಕರಿಸಬೇಕು.

9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳು ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರವನ್ನು ತರುವುದು

ಅವಶ್ಯಕತೆ ಅನುಸಾರ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿನೀರಿನ ವ್ಯವಸ್ಥೆ ಮಾಡುವುದು.

ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಅಥವಾ ಪರ್ಯಾಯ ವಿಧಾನದಲ್ಲಿ ಹಾಜರಾಗಬಹುದು.

ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಆನ್ ಲೈನ್, ಇತರೆ ಪರ್ಯಾಯ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಬೇಕು.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಕಡ್ಡಾಯ.

ಪ್ರೌಢ ಶಾಲೆಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ನಡೆಸಲು ಸಲಹಾತ್ಮಕ ವೇಳಾಪಟ್ಟಿ

ಭೌತಿಕವಾಗಿ ತರಗತಿಗಳನ್ನು ನಡೆಸಲು ಅವಶ್ಯಕ ದೈಹಿಕ ಅಂತರ ಕಾಪಾಡುವ ದೃಷ್ಠಿಯಿಂದ ಶಾಲಾ ಹಂತದಲ್ಲಿ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆಯನ್ನು ಆಧರಿಸಿ 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳನ್ನು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿಕೊಂಡು, ಭೌತಿಕ ತರಗತಿಗಳನ್ನು ನಡೆಸುವುದು.

key words: Schools -start- Release – Guideline – State Government.