ಮೈಸೂರು,ಸೆಪ್ಟೆಂಬರ್,18,2020(www.justkannada.in) : ಶಾಲೆಗಳು ಸೆ.21 ರಿಂದ ಆರಂಭವಾಗಲಿದ್ದು, ಶಿಕ್ಷಕರು ಶಾಲೆಗೆ ಬರಬೇಕು. ಆದರೆ, ತರಗತಿಗಳು ಆರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಶಾಲೆಗಳ ಆರಂಭ ಸಂಬಂಧಿಸಿದಂತೆ ಮಾತನಾಡಿದ ಅವರು, ಸೆ.21 ರಿಂದ ಶಾಲೆಗಳು ಆರಂಭವಾಗಲಿದ್ದು, ಶಿಕ್ಷಕರು ಶಾಲೆಗೆ ಬರಬೇಕು. ಆದರೆ, ತರಗತಿಗಳು ಆರಂಭವಾಗುವುದಿಲ್ಲ. 1 ರಿಂದ 10ರವರೆಗಿನ ದಾಖಲಾತಿಯನ್ನು ಸೆ.30ರೊಳಗೆ ಮುಗಿಸಬೇಕು. ಖಾಸಗಿ ಶಾಲೆಗಳು ಕೇವಲ ಒಂದು ಅವಧಿಯ ಶುಲ್ಕವನ್ನು ಮಾತ್ರ ಪೋಷಕರಿಂದ ಪಡೆಯಬೇಕು. ಆಗೊಮ್ಮೆ ಸಮಸ್ಯೆಯಾದರೆ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಈಗಾಗಲೇ, ಖಾಸಗಿ ಶಾಲೆಗಳಿಗೆ ಸರಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆಯಾದರೆ ಕೂಡಲೇ ಬಿಇಓ ಅವರನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಎಷ್ಟೇ ಮಕ್ಕಳು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ
ರಾಜ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಯಾಗುತ್ತಿದ್ದು, ಪೋಷಕರು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ದರೆ, ಬಿಇಓ ಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮವನ್ನು ಇಲಾಖೆಯು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸ್ಥಳೀಯ ಕೇಬಲ್ ಚಾನಲ್‌ಗಳಲ್ಲಿ ಆನ್‌ಲೈನ್ ತರಗತಿ ಪ್ರಾರಂಭ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ಕೇಬಲ್ ಸಂಸ್ಥೆಗಳ ಮಾಲೀಕರು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ಈಗಾಗಲೇ ಸೇತುಬಂಧ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಚಂದನಕ್ಕೆ ನೀಡುವಷ್ಟು ಹಣವನ್ನು ಸ್ಥಳೀಯ ಕೇಬಲ್ ಟಿವಿಯವರಿಗೆ ನೀಡಬಹುದು. ಅಷ್ಟು ಹಣಕ್ಕೆ ತರಗತಿ ನಡೆಸಿಕೊಡಿ ಅಂತ ಕೇಳಿದ್ದೇವೆ.
ಕೇಬಲ್ ಟಿವಿಯವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಶುರುವಾಗಿದ್ದು, ಪೂರ್ಣಗೊಂಡ ಬಳಿಕ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
key words ; Schools-start-September 21-Not-classes-Minister S. Suresh Kumar-clear