ಮೈಸೂರು,ಡಿಸೆಂಬರ್,13,2024 (www.justkannada.in): ಚಳ್ಳಕೆರೆಯಲ್ಲಿ ನಡೆಯುವ ವಿಜ್ಞಾನ ಮತ್ತು ಗಣಿತ ಬೋಧಿಸುವ ಪ್ರೌಢಶಾಲಾ ಶಿಕ್ಷಕರ ತರಬೇತಿ ದಿನಾಂಕದಿಂದಾಗಿ ಇದೀಗ ಶಿಕ್ಷಕರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ಡಿಸೆಂಬರ್ 15 ರಿಂದ 24ರವರೆಗೆ ಚಿತ್ರದುರ್ಗದ ಚಳ್ಳೇಕೆರೆಯಲ್ಲಿ ಈ ತರಬೇತಿ ಆಯೋಜಿಸಲಾಗಿದೆ. ಆದರೆ ಇದೇ ಸಮಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಈಗಾಗಲೇ ಹಣ ಪಾವತಿಸಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೀಗ ಡಿಎಸ್ ಇಆರ್ ಟಿ ತರಬೇತಿಗೆ ಶಿಕ್ಷಕರನ್ನು ನಿಯೋಜಿಸಿರುವುದು ಶಿಕ್ಷಕ ವೃಂದವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವ ಸಲುವಾಗಿಯೇ ವಿಧಾನ ಮಂಡಲ ಅಧಿವೇಶನವನ್ನು ಒಂದು ದಿನ ಮುಂಚಿತವಾಗಿಯೇ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ಅಂತಹದರಲ್ಲಿ ಶಿಕ್ಷಕರು ಈ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಸಿಕೊಡಬಾರದು ಎಂಬುದು ಶಿಕ್ಷಕರ ಅಳಲು.
ಒಂದು ವೇಳೆ ನಿಯೋಜಿತ ಶಿಕ್ಷಕರನ್ನು ಮುಖ್ಯ ಶಿಕ್ಷಕರು ಬಿಡುಗಡೆ ಮಾಡದೇ ಇದ್ದಲ್ಲಿ ಅಥವಾ ನಿಯೋಜಿತ ಶಿಕ್ಷಕರೇ ತರಬೇತಿಗೆ ಗೈರುಹಾಜರಾದ ಪಕ್ಷದಲ್ಲಿ ತರಬೇತಿಯ ವೆಚ್ಚವನ್ನು ಸಂಬಂಧಿಸಿದವರ ವೇತನದಲ್ಲಿ ಕಟಾವಣೆ ಮಾಡಲು ಮೇಲಾಧಿಕಾರಿಗಳು ಸೂಚನೆಯನ್ನು ನೀಡಿರುವುದು ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸ್ಪಷ್ಟನೆ
ವಿಜ್ಞಾನ ಮತ್ತು ಗಣಿತ ಶಿಕ್ಷಕರ ತರಬೇತಿ ದಿನಾಂಕ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ಗೊಂದಲಕ್ಕೆ ಸಂಬಂಧಿಸಿದಂತೆ ಡಿಎಸ್ ಸಿಇಆರ್ ಟಿ ಯನ್ನು ಸಂಪರ್ಕಿಸಿದಾಗ, ಐಐಎಸ್ಸಿ ತರಬೇತಿಗೆ ಶಿಕ್ಷಕರನ್ನು ಪಾಲ್ಗೊಳ್ಳುವಂತೆ ಮಾಡುವುದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಈ ಮೊದಲೇ ತರಬೇತಿಗೆ ಸಂಬಂಧಿಸಿದಂತೆ ದಿನಾಂಕಗಳನ್ನ ನಿಗದಿಪಡಿಸಲಾಗಿರುತ್ತದೆ.
ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಯವರು ಈ ಬಗ್ಗೆ ಮಾಹಿತಿ ನೀಡಿದ್ದರೇ ಪರ್ಯಾಯ ವ್ಯವಸ್ಥೆಗೆ ಚಿಂತಿಸಬಹುದಿತ್ತು. ಆದರೆ ಇದೀಗ ಕಡೇ ಗಳಿಗೆಯಲ್ಲಿ ತರಬೇತಿ ಮುಂದೂಡುವ ಬಗ್ಗೆ ಶಿಕ್ಷಕ ವೃಂದ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Key words: Sahitya Sammelana, Science Training, Teachers