ಎಸ್ ಸಿಪಿ, ಟಿಎಸ್ ಪಿ ಅನುದಾನ ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಬಳಕೆ ಮಾಡಬೇಕು: ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ

ಮೈಸೂರು ಜುಲೈ, 12,2024 (www.justkannada.in): ಎಸ್ ಸಿಪಿ, ಟಿಎಸ್ ಪಿ ಅನುದಾನವನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಸದ್ಬಳಕೆ ಮಾಡಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು.

ಇಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ(ಡಿ.ಎಲ್.ಪಿ.ಸಿ)  ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿದರು.

ಎಸ್ ಸಿ, ಎಸ್ ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ವರದಿಯಾಗಿರುವ ಪ್ರಕರಣಗಳು ಮುಂದಿನ ಸಭೆಯ ಒಳಗೆ ಚಾರ್ಜ್ ಶೀಟ್ ಆಗಬೇಕು. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್.ಸಿ ಎಸ್.ಟಿ ಕುಂದು ಕೊರತೆಗಳ ಸಭೆಯನ್ನು ನಿಯಮಿತವಾಗಿ ನಡೆಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಾದ ಫಲಾನುಭವಿಗಳಿಗೆ ಜಮೀನು ನೀಡಲು ಅಗತ್ಯ ಜಮೀನನ್ನು ಗುರುತಿಸಬೇಕು ಎಂದು ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದರು.

ಸ್ಮಶಾನಕ್ಕೆ ಅಗತ್ಯವಿರುವ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿ, ದೇವಸ್ಥಾನಗಳಲ್ಲಿ ಎಲ್ಲಾ ಜಾತಿಯ ಜನರಿಗೂ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಪ್ರವೇಶ ಇರಬೇಕು. ಪ್ರವೇಶ ನಿರಾಕರಣೆ ಕಂಡುಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಇದ್ದು ಅಬಕಾರಿ ಇಲಾಖೆಯವರು ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ ಅವರು ಮಾತನಾಡಿ ಕಳೆದ ಒಂದು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಇನ್ನೂ ಬಗೆಹರಿಸಿಲ್ಲ. ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿ. ಈ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳು ಮುಂದಿನ ಸಭೆಯಲ್ಲಿ ಪರಿಹಾರದ ಹಂತಕ್ಕೆ ಬಂದಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯಜೆ ಚಿಕ್ಕಜವರಯ್ಯ ಅವರು ಮಾತನಾಡಿ ಮೈಸೂರು ಜಿಲ್ಲೆಯ ಖಾಸಗಿ ಶಾಲಾ ಕಾಲೇಜುಗಳಲ್ಲಿ ಎಸ್.ಸಿ ಹಾಗೂ ಎಸ್.ಟಿ ಮಕ್ಕಳು ಸರ್ಕಾರಿ ಕೋಟಾದಲ್ಲಿ ಸೇರಿದ್ದರೂ ಅಭಿವೃದ್ಧಿ ಶುಲ್ಕ ಎಂದು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಎಸ್.ಸಿ,  ಎಸ್.ಟಿ ಸಮುದಾಯದವರಿಗೆ ಪರಿಹಾರವಾಗಿ ನೀಡಬೇಕಾದ ಭೂಮಿಯನ್ನು ಗುರುತಿಸಿ ಸರ್ಕಾರದ ಆದೇಶದ ಪ್ರಕಾರ ಆದಷ್ಟು ಬೇಗ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Key words: SCP, TSP, grant, mysore, DC, G. Laxmikanta Reddy