ಬೆಂಗಳೂರು,ಏಪ್ರಿಲ್,24,2024 (www.justkannada.in): ಏಪ್ರಿಲ್ 29 ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ ಪರೀಕ್ಷೆ- 2ರ ಪ್ರವೇಶ ಪತ್ರವನ್ನ ಬಿಡುಗಡೆ ಮಾಡಲಾಗಿದ್ದು, ಆನ್ ಲೈನ್ ನಲ್ಲಿ ಅಡ್ಮಿಷನ್ ಟಿಕೆಟ್ ಲಭ್ಯವಿರಲಿದೆ.
ಇತ್ತೀಚೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿತ್ತು. ನಂತರ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-2 ಬರೆಯಲು ಅರ್ಜಿ ಆಹ್ವಾನಿಸಿ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಸದರಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನ ಬಿಡುಗಡೆ ಮಾಡಿದೆ.
2024ರ ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭಗೊಳ್ಳಲಿದ್ದು, ಮೇ 16ರವರೆಗೆ ನಡೆಯಲಿದೆ. ಈ ಪರೀಕ್ಷೆಗೆ ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಮಂಡಳಿಯ ವೆಬ್ಸೈಟ್ https://kseab.karnatala.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು.
ಹನ್ನೊಂದು ಅಂಕಿಗಳನ್ನೊಳಗೊಂಡ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪತ್ರವನ್ನು ಆನ್ ಲೈನ್ನಲ್ಲಿ ಪಡೆಯಬಹುದಾಗಿದೆ. ಇನ್ನುಳಿದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪ್ರವೇಶ ಪತ್ರ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಒಟ್ಟು 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 32,848 ವಿದ್ಯಾರ್ಥಿಗಳು ಫಲಿತಾಂಶವನ್ನು ಉನ್ನತೀಕರಿಸಿಕೊಳ್ಳಲು ಪರೀಕ್ಷೆ ತೆಗೆದುಕೊಂಡಿದ್ದು, 27,092 ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ, ನಾಟ್ ಕ್ಲಿಯರ್ಡ್ ವಿದ್ಯಾರ್ಥಿಗಳ ಸಂಖ್ಯೆ 89,221 ಆಗಿದ್ದು, 139 ವಿದ್ಯಾರ್ಥಿಗಳು ಶೇ.75 ರಷ್ಟು ಹಾಜರಾತಿ ಇಲ್ಲದೇ 17 ವರ್ಷ ತುಂಬಿದ ಖಾಸಗಿಯಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
Key words: Second PUC, Exam- 2, Admit Card