ಬೆಂಗಳೂರು,ಅಕ್ಟೊಂಬರ್,01,2020(www.justkannada.in) : ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ಬೆಂಕಿ ಆರುವ ಮುನ್ನವೇ, ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿರುವುದು ದುರಂತ.
ಯುಪಿಯ ಬಲರಾಮ್ ಪುರದಲ್ಲಿ ಇಬ್ಬರು ಕಾಮುಕರು 22 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ತಮ್ಮ ಪುತ್ರಿಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಯುವತಿಯ ಪೋಷಕರು ದೂರು ನೀಡಿದ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಲರಾಮ್ ಪುರ ಪೊಲೀಸ್ ವರಿಷ್ಠಾಧಿಕಾರಿ ದೇವ್ ರಂಜನ್ ವರ್ಮಾ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಮಾರ್ಗಮಧ್ಯದಲ್ಲಿಯೇ ಅಸುನೀಗಿದ್ದಾರೆ
ತಮ್ಮ ಪುತ್ರಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸರಿಯಾದ ಸಮಯಕ್ಕೆ ಮನೆಗೆ ಹಿಂತಿರುಗದ ಹಿನ್ನೆಲೆ ಪೋಷಕರು ಗಾಬರಿಗೊಂಡಿದ್ದರು. ಈ ಸಂದರ್ಭ ಆಕೆಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ಆಟೋ ರಿಕ್ಷಾದಲ್ಲಿ ಯುವತಿ ಮನೆಗೆ ಮರಳಿದ್ದಳು. ಆದರೆ, ಆಕೆ ಪರಿಸ್ಥಿತಿ ಗಂಭೀರ ಸ್ಥಿತಿಯಲ್ಲಿತ್ತು. ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಲಾಗಿತ್ತು. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಗಿಯಿತಾದರೂ,ದಾರಿಯಲ್ಲೇ ಆಕೆ ಕೊನೆಯುಸಿರೆಳೆದಳು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ 02 : ಬುಲಂದ್ ಶಹರ್ ನ ಕಾಕೋರ್ ಪ್ರದೇಶ
ಯುಪಿಯ ಬುಲಂದ್ ಶಹರ್ ನ ಕಾಕೋರ್ ಪ್ರದೇಶದ ಗ್ರಾಮದಲ್ಲಿ 14 ವರ್ಷದ ಬಾಲಕಿ ಮೇಲೆ ಬುಧವಾರ ರಾತ್ರಿ ಅತ್ಯಾಚಾರ ನಡೆಸಲಾಗಿದೆ. ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬುಲಂದ್ ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆಂದು ತಿಳಿದು ಬಂದಿದೆ.
ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಅಖಿಲೇಶ್ ಯಾದವ್ ಟ್ವೀಟ್
ಹತ್ರಾಸ್ ಅತ್ಯಾಚಾರ ಘಟನೆ ಖಂಡಿಸಿ ದೇಶಾದ್ಯಂತ ಆಕ್ರೋಶ ಬುಗಿಲೆದ್ದಿದೆ. ಇದರ ಬೆನ್ನಲ್ಲೇ ಯುಪಿಯಲ್ಲಿ ಮತ್ತೆರಡು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿರುವುದು ದೇಶವೇ ತಲೆತಗ್ಗಿಸುವಂತಾಗಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
key words : second-worst-case-Uttar Pradesh-death-young-woman-serious-condition