ಮೈಸೂರು,ಏಪ್ರಿಲ್,20,2021(www.justkannada.in): ನಮ್ಮ ಹೆಮ್ಮಯ ಮೈಸೂರಿನ ಜನರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ರಿಯಾಯಿತಿಯ ನೆಪದಲ್ಲಿ ಕೂರೋನಾವನ್ನು ಆಹ್ವಾನಿಸುತ್ತಿರುವಂತೆ ಭಾಸವಾಗುತ್ತಿದೆ. ಇದು ಅತ್ಯಂತ ವಿವರ್ಯಾಸದ ಸಂಗತಿ ಎಂದು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜೆ ಎಸ್ ಜಗದೀಶ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪಾಲಿಕೆಯ 9 ವಲಯ ಕಚೇರಿಗಳಲ್ಲಿ ಎಂದಿಗಿಂತ ಹೆಚ್ಚು ಸಂಖ್ಯೆಯಲ್ಲಿ ಜನ ಕಾಣಿಸಿಕೊಳ್ಳುತ್ತಿರುವುದು ಆತಂಕದ ವಾತಾವರಣ ಸೃಷ್ಟಿಸಿರುವುದಕ್ಕೆ ಕಾರಣ. ಪಾಲಿಕೆಯು ಪ್ರತಿಬಾರಿಯಂತೆ ಈ ಬಾರಿಯೂ ತೆರಿಗೆಯಲ್ಲಿ ಶೇಕಡ ಐದರಷ್ಟು ವಿನಾಯಿತಿಯನ್ನು ಘೋಷಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಜನರು ನಿಗದಿತ ಸಮಯದೊಳಗೆ ವಲಯ ಕಚೇರಿಗಳಿಗೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ತೆರಿಗೆಯನ್ನು ಪಾವತಿಸಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಕೊರೋನಾದ ಮರು ಆಗಮಿಕೆಯಿಂದ ಪಾಲಿಕೆಯು ಎಚ್ಚರವಹಿಸಬೇಕಾಗಿತ್ತು. ಈ ವಿಷಯದಲ್ಲಿ ಪಾಲಿಕೆಯು ನಿರ್ವಹಣೆಯ ನಿರಾಸಕ್ತಿಯನ್ನು ತೋರಿರುವುದು ಅತ್ಯಂತ ವಿಷಾದನೀಯ. ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಪಾಲಿಕೆಯ ವಲಯ ಕಚೇರಿಗಳ ಸೋಂಕಿತರ ಸಂಖ್ಯೆಯನ್ನು ಉಲ್ಬಣಗೊಳಿಸುವ ಕೇಂದ್ರಬಿಂದುವಾದೀತು.
ಪಾಲಿಕೆಯು ಈ ತಕ್ಷಣ ಇದನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಬೇಕು. ಪರ್ಯಾಯ ವ್ಯವಸ್ಥೆಗಳನ್ನು ಅಳವಡಿಸಿ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಎಲ್ಲಾ ವಲಯ ಕಚೇರಿಗಳಲ್ಲಿಯೂ ಮಾರ್ಗಸೂಚಿಯ ನಿಗಾವಹಿಸಲು ಒಬ್ಬರನ್ನು ನೇಮಕ ಮಾಡುವುದು. ಅಥವಾ ಶೇಕಡಾ 5ರ ವಿನಾಯಿತಿಯನ್ನು ಇನ್ನೂ ಕೆಲ ತಿಂಗಳುಗಳವರೆಗೆ ವಿಸ್ತರಿಸುವುದು ಇಂದಿನ ಸಮಸ್ಯೆಗಳಿಗೆ ಉತ್ತಮ ಮಾರ್ಗೋಪಾಯಗಳಾಗಿರುತ್ತವೆ. ಇಲ್ಲವಾದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಗೆ ಪಾಲಿಕೆಯೇ ನೇರ ಹೊಣೆಯಾಗುತ್ತದೆ ಮತ್ತು ಮೈಸೂರಿಗರು ಬೆಂಗಳೂರಿಗರಂತ ಭೀಕರವಾದ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಎಂದು ಪಾಲಿಕೆಯನ್ನು ಎಚ್ಚರಿಸಿದ್ದಾರೆ.
Key words: senior citizens – inviting- Corona –mysore-city corporation-former member- J S Jagdish