ಮೈಸೂರು,ಆಗಸ್ಟ್,30,2021(www.justkannada.in): ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಮರೆಯಲಾಗದ ಮಹನೀಯರು’ ಕೃತಿಯು ಸೆ.2 ರಂದು ಲೋಕಾರ್ಪಣೆಯಾಗಲಿದೆ.
ಕೃಷ್ಣರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕವು ಅಲ್ಲಿನ ಚೀರನಹಳ್ಳಿ ರಸ್ತೆಯ ಸಾಯಿ ಕನ್ವೆನ್ಸನ್ ಹಾಲ್ ನಲ್ಲಿ ಸಂಜೆ 4ಕ್ಕೆ ಏರ್ಪಡಿಸಿರುವ ಸಮಾರಂಭವನ್ನು ಮಾಜಿ ಸಚಿವರೂ ಆದ ಶಾಸಕ ಸಾ.ರಾ. ಮಹೇಶ್ ಉದ್ಘಾಟಿಸಿ, ಕೃತಿ ಬಿಡುಗಡೆ ಮಾಡುವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾದಯ್ಯ ಮಾಕನಹಳ್ಳಿ ಕೃತಿ ಕುರಿತು ಮಾತನಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಧ್ಯಕ್ಷತೆ ವಹಿಸುವರು.
ಪುರಸಭಾಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ನವನಗರ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ, ತಹಸೀಲ್ದಾರ್ ಎಸ್. ಸಂತೋಷ್, ತಾಪಂ ಇಒ ಎಚ್.ಕೆ. ಸತೀಶ್, ಪ್ರಕಾಶಕ ಮಹಿಮಾ ಶ್ರೀನಿವಾಸ್, ಬಿಇಒ ಟಿ.ಎನ್. ಗಾಯತ್ರಿ, ಪುರಸಭಾ ಮುಖ್ಯಾಧಿಕಾರಿ ಡಿ. ಪುಟ್ಟರಾಜು, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಎಚ್.ಡಿ. ಮಂಜುನಾಥ್ ಮುಖ್ಯ ಅತಿಥಿಗಳಾಗಿರುವರು. ತಾ.ಕಸಾಪ ಅಧ್ಯಕ್ಷ ಡಿಂಡಿಮಶಂಕರ್ ಪ್ರಾಸ್ತಾವಿಕ ಭಾಷಣ ಮಾಡುವರು.
ಖ್ಯಾತ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಮುಖಪುಟ, ರಂಗೂ ಸಂದೇಶ್ ಒಳಪುಟಗಳನ್ನು ವಿನ್ಯಾಸ ಮಾಡಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮುನ್ನುಡಿ ಬರೆದಿದ್ದಾರೆ. ಮೈಸೂರಿನ ಮಹಿಮಾ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಅಂದು ವಿಶೇಷ ರಿಯಾಯ್ತಿ ದರದಲ್ಲಿ 100 ರೂ.ಗೆ ಲಭ್ಯವಿರುತ್ತದೆ.
ಮೂರು ಭಾಗಗಳು
‘ಮರೆಯಲಾಗದ ಮಹನೀಯರು’ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಐವತ್ತರಿಂದ ತೊಂಭತ್ತರ ದಶಕದವರೆಗೆ ಅತ್ಯುತ್ತಮ ಕೆಲಸ ಮಾಡಿರುವ ರಾಜಕಾರಣಿಗಳ ಪೈಕಿ ಸಾಂದರ್ಭಿಕವಾಗಿ ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ. ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಯಶೋದರ ದಾಸಪ್ಪ, ಶಾಂತವೇರಿ ಗೋಪಾಲಗೌಡ, ಬಿ. ಬಸವಲಿಂಗಪ್ಪ, ಅಬ್ದುಲ್ ನಜೀರ್‌ಸಾಬ್, ಅಜೀಜ್ ಸೇಠ್, ಕೆ.ಎಸ್. ಗೌಡಯ್ಯ, ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್, ಪೀಟಿಲು ವಾದಕ ಟಿ. ಚೌಡಯ್ಯ ಅವರನ್ನು ಪರಿಚಯಿಸಲಾಗಿದೆ.
ಎರಡನೇ ಭಾಗದಲ್ಲಿ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದಂಗಳು, ಪ್ರಣಬ್ ಮುಖರ್ಜಿ, ಪ್ರಮೋದ್ ಮಹಾಜನ್, ರಾಮವಿಲಾಸ್ ಪಾಸ್ವಾನ್ ಅವರು ಮೈಸೂರಿನೊಂದಿಗೆ ಹೊಂದಿದ್ದ ಸಂಬಂಧ ಒಳನೋಟಗಳಿವೆ. ಅಲ್ಲದೇ ಮೇದಿನಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಎ.ಕೆ. ಸುಬ್ಬಯ್ಯ, ಎಂ. ಸತ್ಯನಾರಾಯಣ ಅವರ ಬಗ್ಗೆ ಪರಿಚಯ ಇದೆ.
ಅತ್ಯಂತ ಪ್ರಮುಖವಾದ ಮೂರನೇ ಭಾಗದಲ್ಲಿ ಶ್ರೀಸನ್ಮಾನ್ಯರಾಗಿದ್ದುಕೊಂಡೇ ಸಮಾಜಮುಖಿಯಾಗಿ ಕೆಲಸ ಮಾಡಿದ, ಮಾಡುತ್ತಿರುವ ಸಾಧಕರ ವಿವರಗಳಿವೆ. ಅವರಲ್ಲಿ ಅನಾಥ ಹೆಣ್ಣು ಮಕ್ಕಳ ತಾಯಿ ಎನಿಸಿಕೊಂಡಿದ್ದ ಪುಟ್ಟೀರಮ್ಮ, ಕಿವುಡ ಮಕ್ಕಳಿಗೆ ಮಾತು ಕಲಿಸಿದ ಕೆ.ಕೆ. ಶ್ರೀನಿವಾಸನ್, ಜೀವನದುದ್ದಕ್ಕೂ ಶೋಷಣೆ ವಿರುದ್ಧ ಹೋರಾಡಿದ ಪ್ರೊ.ಕೆ. ರಾಮದಾಸ್, ಹಿರಿಯ ಪತ್ರಕರ್ತರಾಗಿದ್ದ ರಾಜಶೇಖರ ಕೋಟಿ, ಕೃಷ್ಣವಟ್ಟಂ, ಚಂದ್ರಶೇಖರ ಕುಕ್ಕಿಕಟ್ಟೆ, ಜಾನಪದ ಗಾಯಕರಾದ ಯಾಚೇನಹಳ್ಳಿ ನಿಂಗಮ್ಮ, ಕಟ್ಟೆ ಸಿದ್ದಮ್ಮ, ಸುಗಮ ಸಂಗೀತ ಗಾಯಕಿ ಎಚ್.ಆರ್. ಲೀಲಾವತಿ, ಇಬ್ಬರು ಅಂಧ ಶಿಕ್ಷಕಿಯರಾದ ಡಾ.ಬಿ.ಎಂ. ಮಂಜುಳಾ, ಆರ್.ಪಿ. ಶ್ವೇತಾರಾಣಿ ಅವರ ಸಾಧನೆಯ ದಾರಿ ವಿವರಿಸಲಾಗಿದೆ. ಎಂಟಿವಿ ಆಚಾರ್ಯ, ಎಂ.ಜೆ. ಶುದ್ಧೋದನ ಸೇರಿದಂತೆ ಹಲವಾರು ಹಿರಿಯ ಕಿರಿಯ ಕಲಾವಿದರ ಬದುಕಿನ ಚಿತ್ರಣ ಇದೆ. ಮೈಸೂರಿನಿಂದ ಹೋಗಿ ಜಮ್ಮು- ಕಾಶ್ಮೀರದಲ್ಲಿ ಕುಲಪತಿಯಾಗಿ ಸವಾಲು ಎದುರಿಸಿದ ಪದ್ಶಶ್ರೀ ಪುರಸ್ಕೃತ ಪ್ರೊ.ಜೆಎಕೆ ತರೀನ್, ಅತ್ಯುತ್ತಮ ಭತ್ತದ ತಳಿ ಸಂಶೋಧಿಸಿದ ಪದ್ಮಭೂಷಣ ಡಾ.ಎಂ. ಮಹದೇವಪ್ಪ, ಈಗಲೂ ಕೃಷಿಯಲ್ಲಿ ಹಲವು ಪ್ರಯೋಗ ಮಾಡುತ್ತಿರುವ ಎಂ.ಕೆ. ಕೈಲಾಸಮೂರ್ತಿ, ಪೌರಕಾರ್ಮಿಕ ಸ್ಥಾನದಿಂದ ಮೇಯರ್ ಗಾದಿಗೆ ಏರಿದ ನಾರಾಯಣ, ಸಾವಿರಾರು ಮಂದಿಗೆ ತಲೆಯ ಮೇಲೊಂದು ಸೂರು ಕಲ್ಪಿಸುವ ಮೂಲಕ ‘ಮನೆ’ ಮಾತಾದ ಡಿ. ಮಾದೇಗೌಡ, ಸಮಾಜಸೇವೆಗೆ ಟೊಂಕಕಟ್ಟಿ ನಿಂತಿರುವ ಕೆ.ಆರ್. ನಗರದ ಕೆ.ಆರ್. ಲಕ್ಕೇಗೌಡರ ಕುಟುಂಬದ ಬಗ್ಗೆ ಲೇಖನಗಳಿವೆ.
Key words: senior journalist -Amsi Prasanna Kumar – September 2-book-release