ಬೆಂಗಳೂರು,ನವೆಂಬರ್,21,2020(www.justkannada.in): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)ದ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ (ವರ್ಚ್ಯುಯಲ್ ಮೀಟ್) ಹಿರಿಯ ಪತ್ರಕರ್ತ ರವಿಬೆಳಗೆರೆ ಅವರಿಗೆ ನಾಡಿನ ಹಿರಿಯ ಪತ್ರಕರ್ತರು, ಅವರ ಒಡನಾಡಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ರವಿಬೆಳಗೆರೆ ಅವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಕ್ಕಮಹಾದೇವಿ ವಿವಿ ಕುಲಪತಿ ಡಾ.ಓಂಕಾರ ಕಾಕಡೆ, ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ, ವಿಜಯ ಕರ್ನಾಟಕ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ, ಕನ್ನಡ ಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ, IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಆಕಾಶವಾಣಿಯ ನಿರ್ಮಲ ಎಲಿಗಾರ್ ಮತ್ತಿತರರು ಭಾಗವಹಿಸಿ ಮಾತನಾಡಿ, ರವಿ ಬೆಳಗೆರೆ ಅವರ ಬದುಕಿನ ಹಲವು ಮಗ್ಗುಲುಗಳನ್ನು ಪರಿಚಯಿಸಿದರು.
ಹಿರಿಯರು, ಒಡನಾಡಿಗಳು ಮತ್ತು ಕಿರಿಯ ಪತ್ರಕರ್ತರು ರವಿ ಬೆಳಗೆರೆ ನಾಡಿನ ಪ್ರತಿಭಾವಂತ ಪತ್ರಕರ್ತ ಮತ್ತು ಬರಹಗಾರ, ಬಹುಮುಖಪ್ರತಿಭೆಯಾಗಿದ್ದು ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಮೈಲುಗಲ್ಲು ಸ್ಥಾಪಿಸಿ ಹೋಗಿದ್ದಾರೆ. ಅವರಿಲ್ಲದ ನಿರ್ವಾತವೊಂದು ಕನ್ನಡ ಪತ್ರಿಕೋದ್ಯಮವನ್ನು ಕಾಡುವಂತಾಗಿದೆ ಎಂದು ಸ್ಮರಿಸಿದರು.
ಹಾಯ್ ಬೆಂಗಳೂರ್ ಪತ್ರಿಕೆಯ ಚೇತನ ಬೆಳಗೆರೆ (ರವಿ ಬೆಳಗೆರೆ ಪುತ್ರಿ) ಅಪ್ಪನೊಂದಿಗಿನ ಆಪ್ತತೆ ಮತ್ತು ಬರವಣಿಗೆ ತುಡಿತದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು. ನುಡಿ ನಮನ ಕಾರ್ಯಕ್ರಮ ಆಯೋಜಿಸಿದ ಕೆಯುಡಬ್ಲ್ಯೂಜೆಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ರವಿ ಬೆಳಗೆರೆ ಪತ್ರಕರ್ತ ಅಷ್ಟೇ ಅಲ್ಲ, ಅವರೊಳೊಗೊಬ್ಬ ಸಾಹಿತಿ, ಸಂಘಟಕನೂ ಇದ್ದದ್ದು ವಿಶೇಷ. ತಪ್ಪು ಒಪ್ಪುಗಳ ಹೊರತಾಗಿ, ಹಲವರಿಗೆ ಸ್ಪೂರ್ತಿ ಸೆಲೆಯಾಗಿ, ಬದುಕಿಗೆ ಪ್ರೇರಕ ಶಕ್ತಿಯೂ ಆಗಿದ್ದರು ಎಂದರು.
ಸಂಘದ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಅವರು ರವಿ ಬೆಳಗೆರೆ ಅವರಿಗೆ ಬಳ್ಳಾರಿ ಜೊತೆಗಿದ್ದ ಸಂಬಂಧ ನೆನಪಿಸಿದರು. ಪತ್ರಕರ್ತ ಮತ್ತು ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ನುಡಿನಮನ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಂ, ಪುಂಡಲೀಕ ಬಾಳೋಜಿ, ಕಾರ್ಯದರ್ಶಿ ಸಂಜೀವ್ ರಾವ್ ಕುಲಕರ್ಣಿ, ಖಜಾಂಚಿ ಡಾ.ಉಮೇಶ್ವರ ಇದ್ದರು.
* ರವಿ ಬೆಳಗೆರೆ ಬಹುಮುಖ ಪ್ರತಿಭೆಯಾಗಿದ್ದರು. ಕನ್ನಡ ಪತ್ರಿಕೋದ್ಯಮ ಪತ್ರಿಭಾವಂತ ಪತ್ರಕರ್ತರೋರ್ವರನ್ನು ಕಳೆದುಕೊಂಡು ಶೂನ್ಯ ಆವರಿಸಿದಂತಾಗಿದೆ.
– ಕೆ.ಎನ್.ಚನ್ನೆಗೌಡ. ಸಂಪಾದಕರು, ವಿಜಯವಾಣಿ.
ರವಿಬೆಳಗೆರೆ ಸದಾ ಸ್ಪೂರ್ತಿಯಾಗಿ ನಿರಂತರ ನಮ್ಮ ಜೊತೆಯಲ್ಲಿಯೇ ಇರುವ ಶಕ್ತಿಯಾಗಿದ್ದಾರೆ. ಅವರ ಜೀವನವೇ ಒಂದು ಸಾಹಸ. ಜೀವನದಲ್ಲಿ ಸವಾಲುಗಳನ್ನು, ಸಂಕಷ್ಟಗಳನ್ನು ಸಹಜವೆಂದು ಸ್ವೀಕರಿಸಿ, ಮುನ್ನಡೆದರೆ ಒಳ್ಳೆಯ ದಿನಗಳು ಬರುತ್ತವೆ ಎಂಬುದಕ್ಕೆ ರವಿಬೆಳಗೆರೆ ಬದುಕು ನಿದರ್ಶನ. ಪ್ರತಿಯೊಬ್ಬರಿಗೂ ಅವರ ಜೀವನ ಸಾಹಸದ ಸಾಧನೆ ಆದರ್ಶವಾಗುವಂತದ್ದು.
– ಹರಿಪ್ರಕಾಶ್ ಕೋಣೆಮನೆ
ಸಂಪಾದಕರು, ವಿಜಯಕರ್ನಾಟಕ.
* ರವಿಬೆಳಗೆರೆ ಸಮಾಜದ ಭ್ರಷ್ಟಾಚಾರ, ಅನ್ಯಾಯಗಳ ನಿವಾರಣೆಯ ಜೊತೆಗೆ ತಮ್ಮ ಬರಹಗಳ ಮೂಲಕ ಮನಸ್ಸಿನ ಯಾತನೆಯ ನಿವಾರಣೆಯನ್ನು ಮಾಡುವ ಶಕ್ತಿ ಅವರಿಗೆ ಸಿದ್ದಿಸಿತ್ತು. ಅಸಹಾಯಕರಿಗೆ ಉಪಕಾರ, ಭರವಸೆಗಳನ್ನು ಮೂಡಿಸುವ ಮೂಲಕ ಅನೇಕರಿಗೆ ತಾಯಿ ಹೃದಯದಿಂದ ನೆರವಾಗುವ ಸ್ವಭಾವ ಅವರಲ್ಲಿತ್ತು.
– ಜೋಗಿ, ಹಿರಿಯ ಪತ್ರಕರ್ತಕರು, ಕನ್ನಡ ಪ್ರಭ.
* ಜ್ಯೂನಿಯರ್ ಗಳನ್ನು ಬೆನ್ನುತಟ್ಟಿ ಬೆಳೆಸುವ ಗುಣ ಹೊಂದಿದ್ದ ರವಿಬೆಳಗೆರೆ ಪ್ರಾಕ್ಟಿಕಲ್ ತರಬೇತಿ ಕೂಡ ಕೊಡುತ್ತಿದ್ದರು. ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ಲಂಕೇಶ್ ಅವರಂತೆ ಮುಖ್ಯ ಸಾಲಿನಲ್ಲಿ ರವಿಬೆಳಗೆರೆ ಇದ್ದರು.
– ಪ್ರೊ.ಓಂಕಾರ್ ಕಾಕಡೆ
ಕುಲಪತಿಗಳು,ಅಕ್ಕಮಹಾದೇವಿ ವಿಶ್ವವಿದ್ಯಾಲಯ, ಬಿಜಾಪುರ.
*ಹಾಯ್ ಬೆಂಗಳೂರು ಪತ್ರಿಕೆಯನ್ನು ನನ್ನ ಕೈಯಲ್ಲಿ ಬಿಡುಗಡೆ ಮಾಡಿಸಿ, ನಾಡಿನ ಉದ್ದಗಲಕ್ಕೂ ಪತ್ರಿಕೆ ಬೆಳಸಿ, ಯಶಸ್ವಿಯಾಗಿ ನಡೆಸಿದ ಸಾಹಸಿ ರವಿ ಬೆಳಗೆರೆ.
ಬಿ.ವಿ.ಮಲ್ಲಿಕಾರ್ಜುನಯ್ಯ, ಅಧ್ಯಕ್ಷರು, IFWJ
*ಮಹಿಳಾ ತುಡಿತಗಳನ್ನು ಅದ್ಭುತವಾಗಿ ಬರೆಯುತ್ತಿದ್ದ, ಪ್ರೇರಣೆಯಾಗುವ ಬರಹಗಳನ್ನು ನೀಡಿದ ವಿಭಿನ್ನ ಪತ್ರಕರ್ತ ರವಿ ಬೆಳಗೆರೆ.
-ನಿರ್ಮಲ ಎಲಿಗಾರ್, ಆಕಾಶವಾಣಿ, ಬೆಂಗಳೂರು.
Key words: senior journalist -Ravi Belagere-KUWJ-nudinamana