ಮೈಸೂರು,ಅಕ್ಟೋಬರ್,10,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಜನ ಸೇರುವುದಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ ಜಂಬೂಸವಾರಿಗೆ 300 ಜನ ಹಾಗೂ ದಸರಾ ಉದ್ಘಾಟನೆಗೆ 200 ಜನರಿಗೆ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಎಸ್.ಎಲ್ ಭೈರಪ್ಪ, ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಜಂಬೂಸವಾರಿಯನ್ನ ಮಾವುತರೇ ಮಾಡ್ತಾರೆ ಅದಕ್ಯಾಕೆ ಜನ ಬೇಕು..? ಎಲ್ಲರೂ ಅವರ ಮನೆಯಲ್ಲೆ ದಸರಾ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಪೂಜೆ ಮಾಡಲಿ. ಅದಕ್ಕೆ 200 ಮಂದಿ ಯಾಕೆ ಭಾಗಿಯಾಗಬೇಕು. ಜಂಬೂಸವಾರಿ ನಡೆಸೋದು ಮಾವುತರು. ಅದಕ್ಕೂ ಜನರು ಬೇಕಾಗಿಲ್ಲ. ಕೆಲವರು ದಸರಾದಿಂದ ಬಿಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿ ಕೊರೋನಾ ಹೆಚ್ಚಾದರೆ ಹೊಣೆ ಯಾರು.? ಬಿಸಿನೆಸ್ ಎಲ್ಲ ಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಎಸ್.ಎಲ್ ಭೈರಪ್ಪ ಹೇಳಿದ್ದಾರೆ.
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕಳೆದ ವರ್ಷ ದಸರಾ ಉದ್ಘಾಟಿಸಿದ್ದರು.
Key words: Senior writer-SL Bhairappa -objected – Mysore Dasara- celebrations