ಬೆಂಗಳೂರು:ಜೂ-28: ರಾಜ್ಯದಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ (ಪಿಎಂ – ಕಿಸಾನ್)ಯನ್ನು ಚುರುಕಾಗಿಸಲು ಶೀಘ್ರವೇ ‘ಪಿಎಂ-ಕಿಸಾನ್ ಡೇಟಾ ಕಲೆಕ್ಷನ್ ಮೊಬೈಲ್ ಆಪ್’ ಬಿಡುಗಡೆ ಮಾಡಲು ಭೂ ಮಾಪನ ಮತ್ತು ಭೂ ದಾಖಲೆ ಇಲಾಖೆ ಸಜ್ಜಾಗಿದೆ.
ಫಸಲು ಬಿಮಾ ಯೋಜನೆ ಹಾಗೂ ಪಿಎಂ-ಕಿಸಾನ್ ಯೋಜನೆಗೆ ಅರ್ಜಿ ಹಾಕಲು ಪಹಣಿ ಕಡ್ಡಾಯ. ಹೀಗಾಗಿ, ಕಳೆದ ವಾರ ರಾಜ್ಯಾದ್ಯಂತ ಭೂಮಾಪನ ಮತ್ತು ಭೂ ದಾಖಲೆ ಇಲಾಖೆಯ ಭೂಮಿ ಸರ್ವರ್ ಡೌನ್ ಆಗಿತ್ತು. ತಾಲೂಕು, ನಾಡ ಕಚೇರಿ, ಗ್ರಾಮ ಪಂಚಾಯಿತಿ ಮತ್ತು ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ರೈತರು ಐದರಿಂದ ಆರು ತಾಸು ಸಾಲಿನಲ್ಲಿ ನಿಂತರೂ ಪಹಣಿ ಸಿಗುತ್ತಿರಲಿಲ್ಲ. ಈ ಸಮಸ್ಯೆ ನಿವಾರಿಸಲು ಇಲಾಖೆ ಹೊಸ ಪ್ಲಾ್ಯನ್ ಮಾಡಿಕೊಂಡಿದ್ದು, ಆಪ್ ಬಿಡುಗಡೆಯಾದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಲು ಪಹಣಿ ಬೇಕೆಂದಿಲ್ಲ.
ಏನಿದು ಆಪ್?: ಆಯಾ ಗ್ರಾಮ ಪಂಚಾಯಿತಿ ವ್ಯಾಪಿಯ ಗ್ರಾಮ ಲೆಕ್ಕಿಗ ತನ್ನ ಮೊಬೈಲ್ನಲ್ಲಿ ಪಿಎಂ-ಕಿಸಾನ್ ಡೇಟಾ ಕಲೆಕ್ಷನ್ ಮೊಬೈಲ್ ಆಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ, ತಮ್ಮ ವ್ಯಾಪಿಗೆ ಬರುವ ಪ್ರತಿ ಹಳ್ಳಿಯಲ್ಲಿರುವ ರೈತರ ಮನೆಗೆ ತೆರಳಿ ಜಮೀನಿನ ಸರ್ವೆ ನಂಬರ್, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ರೈತನ ಹೆಸರು ಸೇರಿ ಇನ್ನಿತರ ಮಾಹಿತಿಗಳನ್ನು ಆಪ್ನಲ್ಲಿ ನಮೂದಿಸಿಕೊಳ್ಳಬೇಕು. ಅಂತಿಮವಾಗಿ ಗ್ರಾಮಲೆಕ್ಕಿಗ ಆ ಮಾಹಿತಿಯನ್ನು ಇಲಾಖೆಗೆ ಕಳುಹಿಸಬೇಕು. ಇದರಿಂದಾಗಿ ರೈತರು ಪಹಣಿಗಾಗಿ ದಿನಗಟ್ಟಲೆ ಕಾಯುವ ತೊಂದರೆ ತಪ್ಪಲಿದೆ ಎಂದು ಭೂ ದಾಖಲೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸರ್ವರ್ ಡೌನ್: ಕಳೆದ 10 ದಿನಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಪಹಣಿ ನೀಡಲಾಗಿತ್ತು. ಒಂದೇ ದಿನದಲ್ಲಿ 2.5 ಲಕ್ಷ ಪಹಣಿ ನೀಡಲಾಗಿತ್ತು. 4 ದಿನಗಳಿಂದ ಭೂಮಿ ಸರ್ವರ್ ಡೌನ್ ಆಗಿದ್ದರಿಂದ ರೈತರಿಗೆ ತೊಂದರೆಯಾಗಿತ್ತು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಇಲಾಖೆ ಹೊಸ ಸರ್ವರ್ ಅಳವಡಿಸಲು ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲೇ ಸರ್ಕಾರದಿಂದ ಒಪ್ಪಿಗೆ ಪಡೆಯುವುದಾಗಿ ಇಲಾಖೆಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
30ರವರೆಗೆ ಅರ್ಜಿ ವಿಸ್ತರಣೆ
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಾಯಿಸಿಕೊಳ್ಳಲು ಜೂ.30ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಮೊದಲು ಜೂ.25ರವರೆಗೆ ಕೊನೇ ದಿನವಾಗಿತ್ತು. 2018ರ ಡಿ.1ರಿಂದ ಪ್ರಾರಂಭಗೊಂಡಿರುವ ಪಿಎಂ-ಕಿಸಾನ್ ಯೋಜನೆಯಿಂದ ಇದುವರೆಗೆ ಕೇವಲ 2.35 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ದಿನಾಂಕ ವಿಸ್ತರಿಸಲಾಗಿದೆ.
ಕೃಪೆ:ವಿಜಯವಾಣಿ