ಬೆಂಗಳೂರು,ಫೆಬ್ರವರಿ,12,2021(www.justkannada.in) : ಕಾಂಗ್ರೆಸ್ ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಪಕ್ಷವಾಗಿದೆ. ಹೀಗಾಗಿ, ಪ್ರತ್ಯೇಕವಾಗಿ ಅಹಿಂದ ಹೋರಾಟದ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಹಿಂದ ಪರವಾಗಿಯೇ ಇದೆ. ಹೀಗಾಗಿ, ಸಮಾವೇಶ ನಡೆಸಿ ಮತ್ತೆ ಸಂಘಟಿಸುವ ಅವಶ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಮೀಸಲಾತಿ ಆಗ್ರಹದ ಹೋರಾಟದಲ್ಲಿ ರಾಜಕೀಯ, ಷಡ್ಯಂತ್ರವೂ ಇದೆ
ವಿವಿಧ ಸಮುದಾಯಗಳ ಮೀಸಲಾತಿ ಆಗ್ರಹದ ಹೋರಾಟದಲ್ಲಿ ರಾಜಕೀಯವೂ ನಡೆಯುತ್ತಿದೆ ಹಾಗೂ ಷಡ್ಯಂತ್ರವೂ ಇದೆ. ಅರ್ಹವಾಗಿ ಮೀಸಲಾತಿ ಸಿಗಬೇಕಾದ ಸಮುದಾಯಗಳಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿದರು.
ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಮುಖ್ಯಮಂತ್ರಿ ಸಮಯ ಕೇಳಿದ್ದಾರೆ. ಅವರ ನಿರ್ಣಯಕ್ಕಾಗಿ ಕಾಯುತ್ತೇವೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಿರ್ಣಯಿಸುತ್ತೇವೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯ ಆಯ್ಕೆಯ ಕುರಿತು ಸ್ಥಳೀಯ ಹಾಗೂ ರಾಜ್ಯಮಟ್ಟದ ನಾಯಕರು ಚರ್ಚಿಸಿದ್ದೇವೆ. ಕೆಲವು ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು.
ಪಕ್ಷದಿಂದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಿಸಬಹುದು. ಆದರೆ, ಅದೊಂದೇ ಮಾನದಂಡ ಆಗುವುದಿಲ್ಲ. ಆತನ ಆಸಕ್ತಿ ಹಾಗೂ ಇತರ ಕೆಲವು ಮಾನದಂಡಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿಗೂ ಜನ ಸಂಘಕ್ಕೂ ಆಗ ಸಂಬಂಧವಿರಲಿಲ್ಲ
ಕಾಲೇಜಿನಲ್ಲಿದ್ದಾಗ ಸತೀಶ ಎಬಿವಿಪಿ ಅಧ್ಯಕ್ಷರಾಗಿದ್ದರು ಎಂಬ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಲೇಜಿನಲ್ಲಿದ್ದಾಗ ಪ್ರತಿ ವರ್ಷ ಒಬ್ಬರನ್ನು ನಾಯಕರನ್ನಾಗಿ ಮಾಡುತ್ತಿದ್ದರು. ನಾನೂ ಆಗಿದ್ದೆ. ಬಿಜೆಪಿಗೂ ಜನ ಸಂಘಕ್ಕೂ ಆಗ ಸಂಬಂಧವಿರಲಿಲ್ಲ. ಹಿಂದೆ ಜನ ಸಂಘದ ಕಾರ್ಯಕ್ರಮ ನೋಡಲು ಊರಿಗೆ ಊರೇ ಹೋಗುತ್ತಿತ್ತು. ಕ್ರಮೇಣ ಅದರ ಹೋರಾಟ, ವಿಚಾರಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಹೀಗಾಗಿ, ನಾನು ಅಧ್ಯಕ್ಷನಾಗಿದ್ದೆ ಎನ್ನುವುದು ಮುಖ್ಯ ಆಗುವುದಿಲ್ಲ ಎಂದು ತಿಳಿಸಿದರು.
key words : Separately-ahinda-Fighting-Not required-KPCC-President-Satheesa jarakiholi