ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ‌: ರಾಜ್ಯಪಾಲರಿಗೆ ದೂರು

ಮೈಸೂರು,ಸೆಪ್ಟಂಬರ್,5,2024 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಗೆದಷ್ಟು ಬಯಲಾಗುತ್ತಿದ್ದು ಇದೀಗ ಹಿಂದೆ  ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ‌ ಕೇಳಿ ಬಂದಿದೆ.

ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಿದ ಆರೋಪ ದಿನೇಶ್ ಕುಮಾರ್ ವಿರುದ್ದ ಕೇಳಿ ಬಂದಿದೆ. ಮೈಸೂರು ತಾಲ್ಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮದ ಸರ್ವೆ ನಂಬರ್ 118 ರಲ್ಲಿ 5.14 ಎಕರೆ ಜಮೀನು ವಿಚಾರದಲ್ಲಿ ಎಂ.ಬಿ ಪೊನ್ನಪ್ಪ ಎಂಬುವರ ಜೊತೆ ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಶಾಮೀಲಾಗಿ ವಂಚನೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಂಚನೆಗೊಳಗಾದವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಬಿ.ಎಂ ಸುಬ್ರಹ್ಮಣ್ಯ ಎಂಬುವರಿಗೆ ಸೇರಿದ ಜಮೀನು ಇದಾಗಿದ್ದು, ಈ ಸಂಬಂಧ ಸುಬ್ರಹ್ಮಣ್ಯ ಪರ  ಮುಂಜುನಾಥ್ ಎಸ್ ಗೌಡ ಅವರು  ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  ಬಿ.ಎಂ ಸುಬ್ರಹ್ಮಣ್ಯ ಹಾಗೂ ದೇವಕಿ ದಂಪತಿ ಮತ್ತು ಪುತ್ರ ವಿಕ್ಕಿ ಎಂಬುವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಪೊನ್ನಪ್ಪ ಅವರು ಸುಬ್ರಹ್ಮಣ್ಯ ಅವರ ಭಾಮೈದುನನಾಗಿದ್ದಾರೆ. ಸುಬ್ರಹ್ಮಣ್ಯ ದಂಪತಿ ಹಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. ಆ ಸಂದರ್ಭದಲ್ಲಿ ಪೊನ್ನಪ್ಪ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಜಿ.ಪಿ.ಎ ಸೃಷ್ಟಿ ಮಾಡಿ ವಂಚನೆ ಮಾಡಿದ್ದಾರೆ.  ಈ ಬಗ್ಗೆ ವಿದೇಶದಿಂದ ಬಂದ ನಂತರ ಮುಡಾ ಆಯುಕ್ತರಿಗೆ ದಂಪತಿ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಬಳಿಕ ರಾತ್ರೋರಾತ್ರಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಶಾಮೀಲಾಗಿದ್ದಾರೆಂದು ಮಂಜುನಾಥ್ ಆರೋಪಿಸಿದ್ದಾರೆ.

ಸುಬ್ರಹ್ಮಣ್ಯ ಅವರಿಗೆ ಸೇರಿದ ಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ. ಎಂಟು ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಯಾರಿಗೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಕೊಡುತ್ತಿಲ್ಲ. ಮುಡಾ ಹಗರಣದ ತನಿಖೆ ನಡೆಯುತ್ತಿದೆ ಹಾಗಾಗಿ ಯಾವುದೇ ಮಾಹಿತಿ ಕೊಡುವುದಿಲ್ಲ ಎನ್ನುತ್ತಿದ್ದಾರೆ ಎಂದು  ಮಂಜುನಾಥ್ ಎಸ್ ಗೌಡ ದೂರಿದರು.

ಈ ಸಂಬಂಧ ರಾಜ್ಯಪಾಲರು, ಮೈಸೂರು ಜಿಲ್ಲಾಧಿಕಾರಿ, ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೇವಕಿ ಸುಬ್ರಹ್ಮಣ್ಯ ದೂರು ನೀಡಿದ್ದಾರೆಂದು ಮಂಜುನಾಥ್ ಎಸ್ ಗೌಡ ತಿಳಿಸಿದ್ದಾರೆ.

Key words: serious allegation, against former Muda Commissioner, Dinesh Kumar