ಮಂಡ್ಯ,ಅಕ್ಟೋಬರ್,09,2020(www.justkannada.in) : ಜೆಡಿಎಸ್ ಶಾಸಕನಾಗಿದ್ದಾಗ ಅಭಿವೃದ್ಧಿ ಕೆಲಸ ಕಾರ್ಯಗಳು ಹಿನ್ನಡೆಯಾಗಿದ್ದವು, ಬಿಜೆಪಿ ಪಕ್ಷ ಸೇರಿ ಮೂರನೇ ಬಾರಿಗೆ ಶಾಸಕನಾಗಿ ಮೂರು ಪ್ರಮುಖ ಖಾತೆಗಳ ಸಚಿವನಾಗಿದ್ದೇನೆ ಎಂದು ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಬೇಸರವ್ಯಕ್ತಪಡಿಸಿದ್ದಾರೆ.ಕೆ.ಆರ್.ಪೇಟೆ ತಾಲ್ಲೂಕಿನ ಬಳ್ಳೇಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಡೇನಹಳ್ಳಿ, ನಾರ್ಗೋನಹಳ್ಳಿ, ಕಾಮನಹಳ್ಳಿ, ಮೊಸಳೆಕೊಪ್ಪಲು, ಹೆಮ್ಮಡಹಳ್ಳಿ, ಹಳೆಯೂರು, ನಾಟನಹಳ್ಳಿ ಹಾಗೂ ಬಳ್ಳೇಕೆರೆ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಾರಾಯಣಗೌಡ ಮಾತನಾಡಿದರು.
ಕೆ.ಆರ್.ಪೇಟೆ ತಾಲ್ಲೂಕು ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರವು ಕೊರೋನಾ ಸಂಕಷ್ಠದ ನಡುವೆಯೂ ರಾಜ್ಯದ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದರು.
ಕೆ.ಆರ್.ಪೇಟೆಯನ್ನು ಶಿಕಾರಿಪುರದ ಮಾದರಿಯಲ್ಲಿ ಅಭಿವೃದ್ಧಿ
ಕೆ.ಆರ್.ಪೇಟೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ನನ್ನ ಮೂಲ ಮಂತ್ರವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟಮಾತಿನಂತೆ ನನ್ನನ್ನು ಸಚಿವನನ್ನಾಗಿ ಮಾಡಿ ಮೂರು ಪ್ರಮುಖ ಖಾತೆಗಳ ಜವಾಬ್ಧಾರಿ ನೀಡಿದ್ದಾರೆ. ಕೆ.ಆರ್.ಪೇಟೆಯನ್ನು ತಮ್ಮ ಕರ್ಮಭೂಮಿಯಾದ ಶಿಕಾರಿಪುರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಒಂದು ಸಾವಿರ ಕೋಟಿ ವಿಶೇಷ ಅನುದಾನ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಟೀಕಾಕಾರರಿಗೆ ಅಭಿವೃದ್ಧಿ ಕೆಲಸಗಳಿಂದ ಉತ್ತರ
ನನ್ನ ಜೀವನದ ಕೊನೆಯ ಉಸಿರಿನವರೆಗೂ ಜನತೆಯ ಸೇವಕನಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಟೀಕೆಗಳು ಸಾಯುತ್ತವೆ, ಆದರೆ ನಾನು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಟೀಕಾಕಾರರಿಗೆ ಅಭಿವೃದ್ಧಿ ಕೆಲಸಗಳ ಮೂಲಕ ಉತ್ತರ ನೀಡುತ್ತೇನೆ. ಬೂಕನಕೆರೆ ಹೋಬಳಿಯಲ್ಲಿ 10ಸಾವಿರ ಎಕರೆಗೂ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಹೊಸಹೊಳಲು ಕಾಲುವೆ ಕಾಮಗಾರಿಯನ್ನು ಆದಷ್ಟು ಬೇಗ ಸಂಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
key words : Setbacks-development-work-JDS MLA-Minister Narayana Gowda