ಥಾಣೆ,ಆಗಸ್ಟ್,20,2024 (www.justkannada.in): ಸ್ಥಳೀಯ ಶಾಲೆಯ ಇಬ್ಬರು ಅಪ್ರಾಪ್ತ ಬಾಲಕೀಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯ ಬದ್ಲಾಪುರ್ ನಲ್ಲಿ ಸಾವಿರಾರು ಜನರು ಭಾರೀ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬದ್ಲಾಪುರ ಶಾಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿ ಬಂದಿದ್ದು ಪ್ರಕರಣ ದಾಖಲಿಸುವಲ್ಲಿ ಪೊಲೀಸರ ಕಡೆಯಿಂದ ವಿಳಂಬವಾಯಿತು.
ಇದರಿಂದ ಕೋಪಗೊಂಡ ಪೋಷಕರು, ಜನರು ಇಂದು ಬದ್ಲಾಪುರ ರೈಲ್ವೆ ನಿಲ್ದಾಣ ಮತ್ತು ಆದರ್ಶ್ ಶಾಲೆಯ ಹೊರಗೆ ಪ್ರತಿಭಟನೆ ಪ್ರಾರಂಭಿಸಿದ್ದು ಬಳಿಕ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ನಗರವನ್ನು ಬಂದ್ ಮಾಡಿ, ಬದ್ಲಾಪುರ್ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ, ರೈಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರತಿಭಟನಾಕಾರರನ್ನ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಘಟನೆಯನ್ನು ಖಂಡಿಸಿದ್ದು, ಆರೋಪಿಯನ್ನ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಎಸ್ ಐಟಿ ರಚನೆಗೆ ಆದೇಶ ಹೊರಡಿಸಿದೆ. ಘಟನೆಗೆ ಸಂಬಂಧಪಟ್ಟಂತೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಇತರ ಮೂವರನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: sexual assault, girls, Protest, Maharastra