ಬೆಳಗಾವಿ, ಡಿಸೆಂಬರ್,17,2024 (www.justkannada.in): 11 ಜೂನ್ 2023 ರಂದು ಜಾರಿಗೆ ಬಂದಿರುವ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ರಾಜ್ಯ ಸರ್ಕಾರದಿಂದ ನವೆಂಬರ್ 2024ರ ವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ರೂ.6543 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಜರುಗುತ್ತಿರುವ ಚಳಿಗಾಲ ಅಧಿವೇಶನದಲ್ಲಿ, ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದ ವೇಳೆ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಸಚಿವ ಸಂತೋಷ್ ಲಾಡ್ ಉತ್ತರಿಸಿದರು.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಾಲ್ಕು ನಿಗಮದ ಬಸ್ ಗಳಲ್ಲಿ ಪ್ರತಿನಿತ್ಯ 1.16 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ಶಕ್ತಿಯೋಜನೆಯಡಿ ರೂ.8237 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಇದರಲ್ಲಿ ರೂ.6543 ಕೋಟಿ ಈಗಾಗಲೇ ನಿಗಮಗಳಿಗೆ ಪಾವತಿ ಮಾಡಿದ್ದು, ಉಳಿದ 1694 ಕೋಟಿ ಹಣವನ್ನು ಹಂತ ಹಂತವಾಗಿ ನಿಗಮಗಳಿಗೆ ನೀಡಲಾಗುವುದು ಎಂದರು.
ಸಾರಿಗೆ ನಿಗಮದ ನೌಕರರೊಂದಿಗೆ ಸಂಧಾನ:
ಸಾರಿಗೆ ನಿಗಮಗಳ ನೌಕರರ ವೇತನವನ್ನು ಕೈಗಾರಿಕಾ ಒಪ್ಪಂದಗಳ ಅನ್ವಯ, ಪ್ರತಿ 4 ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು. ಕೋವಿಡ್ ಕಾರಣದಿಂದ ಕಳೆದ ಬಾರಿ 2020ಕ್ಕೆ ಪರಿಷ್ಕರಿಸಬೇಕಾದ ವೇತನವನ್ನು 2023ರಲ್ಲಿ ಪರಿಷ್ಕರಿಸಲಾಯಿತು. ಡಿ.31ರ ಒಳಗಾಗಿ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಿಗಮದ ನೌಕರರೊಂದಿಗೆ ಸಂಧಾನ ಒಪ್ಪಂದ ಮಾಡಿಕೊಳ್ಳಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ಮುಷ್ಕರ ಹೂಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
4304 ಬಸ್ ಖರೀದಿ..
5000 ಬಸ್ ಖರೀದಿಸುವುದಾಗಿ ಸರ್ಕಾರ ಹೇಳಿತ್ತು. ಇದರಂತೆ ಇದುವರೆಗೂ 4304 ಬಸ್ಗಳನ್ನು ಖರೀದಿಸಲಾಗಿದೆ. ಉಳಿದ ಬಸ್ಗಳನ್ನು ಸಹ ಶೀಘ್ರ ಖರೀದಿಸಿ ಅಗತ್ಯ ಇರುವ ಕಡೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸರ್ಕಾರ ಕೂಡಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ನೌಕರರ ಜನವರಿಯಿಂದ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಕುರಿತು ಮನೆಗೆ ಬಂದು ಮನವಿಯನ್ನು ಸಹ ನೀಡಿದ್ದಾರೆ ಎಂದರು.
ಶಾಸಕ ಡಾ.ಅಶ್ವಥ್ ನಾರಾಯಣ ಸಿ.ಎನ್. ಮಾತನಾಡಿ, ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿ ಹಣ ನೀಡಿ ವೇತನ ಪರಿಷ್ಕರಣೆಗೆ ಅನುವು ಮಾಡಿಕೊಡಬೇಕು ಎಂದು ಕೋರಿದರು. ಈ ಮನವಿಗೆ ಹಲವು ಶಾಸಕರು ಧ್ವನಿಗೂಡಿಸಿದರು.
Key words: Shakti Yojana, Rs. 6543 crore, released