ಬೆಂಗಳೂರು, ಅಕ್ಟೋಬರ್ 29, 2023 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ವಿಚಾರವಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಯೋಜನೆಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಈಗ ಶೇ.29 ಮಾತ್ರವೇ ಬಾಕಿ ಉಳಿದಿದ್ದು, ಇನ್ನೊಂದು ತಿಂಗಳಲ್ಲಿ ಅದೂ ಖಾಲಿಯಾಗಲಿದೆ. ಗೃಹಲಕ್ಷ್ಮಿಯನ್ನು ಒಂದೇ ತಿಂಗಳಿಗೆ ನಿಲ್ಲಿಸಿ ತಾಂತ್ರಿಕ ದೋಷದ ನೆಪದೊಳಗೆ ನುಸುಳಿಕೊಂಡಿರುವ ಸಿಎಂ ಸಿದ್ದರಾಮಯ್ಯನವರು, ಸ್ಥಗಿತವಾಗುತ್ತಿರುವ ಮತ್ತೊಂದು ಗ್ಯಾರಂಟಿಗೆ ಕಾರಣ ಹುಡುಕುವುದಲ್ಲಿ ತಲ್ಲೀನವಾಗಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿ ಆರೋಪ ಮಾಡಿದೆ.
ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 2,800 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಈ ಪೈಕಿ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ 2 ಸಾವಿರ ಕೋಟಿ ರೂ. ಮೊತ್ತದ ಉಚಿತ ಟಿಕೆಟ್ಗಳನ್ನು ವಿತರಿಸಲಾಗಿದೆ. ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ದೊಡ್ಡ ಹೊರೆ ಬೀಳುತ್ತಿದೆ ಎಂದು ಬಿಜೆಪಿ ಹೇಳಿದೆ.
ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಕುರ್ಚಿ ಕದನ ಜೋರಾಗಿದೆ. ಎರಡೂ ಕಡೆಯವರು ತಮ್ಮ ಬೆಂಬಲಿಗರನ್ನು ಮುಂದಿಟ್ಟು ನಡೆಸುತ್ತಿರುವ ಗೆರಿಲ್ಲಾ ಯುದ್ಧ ಸರ್ಕಾರವನ್ನು ನಿಸ್ತೇಜವಾಗಿಸಿದೆ, ರಾಜ್ಯದ ಅಭಿವೃದ್ಧಿ ಕಾಂಗ್ರೆಸ್ನಲ್ಲಿ ಯಾರಿಗೂ ಬೇಡವಾಗಿದೆ ಎಂದು ಬಿಜೆಪಿ ಟ್ವಿಟ್ಟರ್ ನಲ್ಲಿ ಟೀಕಾ ಪ್ರಹಾರ ನಡೆಸಿದೆ.