ಬೆಂಗಳೂರು,ಜನವರಿ,26,2023(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ (ಕೆಯುಡಬ್ಲ್ಯೂಜೆ) ಗುರುಲಿಂಗ ಸ್ವಾಮಿ ಹೊಳಿಮಠ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಕೆಯುಡಬ್ಲ್ಯೂಜೆ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಮತ್ತು ಹಿರಿಯ ಪತ್ರಕರ್ತ ಶಂಕರ ಪಾಗೋಜಿ ಅವರನ್ನು ಆಯ್ಕೆ ಮಾಡಲಾಗಿದೆ.
ವಿಜಯ ಕರ್ನಾಟಕ, ಉಷಾಕಿರಣ, ಕಸ್ತೂರಿ ಟಿವಿ, ಸುವರ್ಣ ನ್ಯೂಸ್, ಉದಯವಾಣಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕ್ರೀಯಾಶೀಲವಾಗಿ ಕೆಲಸ ಮಾಡಿರುವ ಶಂಕರಪಾಗೋಜಿ ತಮ್ಮ ಅಂಕಣ ಮೂಲಕ ಉತ್ತರ ಕರ್ನಾಟಕ ಭಾಗದ ಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡವರು. ಗುರುಲಿಂಗ ಸ್ವಾಮಿ ಹೊಳಿಮಠ ಅವರ ಬಳಗದ ಅಭಿಲಾಷೆಯನ್ನು ಪರಿಗಣಿಸಿ, ಪಾಗೋಜಿ ಅವರ ಸೇವೆಯನ್ನು ಸ್ಮರಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ವಿಜಯಪುರದಲ್ಲಿ ಫೆಬ್ರವರಿ 4 & 5 ರಂದು ನಡೆಯಲಿರುವ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುಲಿಂಗ ಸ್ವಾಮಿ ಹೊಳಿಮಠ ಹೆಸರಿನ ದತ್ತಿನಿಧಿಗೆ ಚಾಲನೆ ನೀಡಿ, ಇದೇ ಸಂದರ್ಭದಲ್ಲಿ ಮೊದಲ ಪ್ರಶಸ್ತಿಗೆ ಭಾಜನರಾಗಿರುವ ಶಂಕರ ಪಾಗೋಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು.
ಪ್ರಶಸ್ತಿ ಹಿನ್ನೆಲೆ:
ಸುದ್ದಿ ಮೂಲ, ವಿಜಯ ಕರ್ನಾಟಕ, ಈ ಟಿವಿ, ಟಿವಿ 5, ವಿಜಯವಾಣಿ ಸೇರಿದಂತೆ ಹಲವು ಮಾಧಮಗಳಲ್ಲಿ ಕ್ರಿಯಾಶೀಲ ಪತ್ರಕರ್ತರಾಗಿ, ಮುಖ್ಯಮಂತ್ರಿ ಮಾಧ್ಯಮ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದ ಗುರುಲಿಂಗ ಸ್ವಾಮಿ ಹೊಳಿಮಠ ಅವರು ಸ್ನೇಹ ಜೀವಿ ಮತ್ತು ಸಹೃದಯಿ. ಅವರ ಸಾವು ಅರಗಿಸಿಕೊಳ್ಳಲಾಗದ ಸಂಗತಿ. ಅವರ ಸೇವೆಯನ್ನು ಸ್ಮರಿಸಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದತ್ತಿ ನಿಧಿ ಸ್ಥಾಪಿಸಿದೆ. ಇತ್ತೀಚೆಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು.
Key words: Shankar Pagoji – Gurulingaswamy Holimath- Award KUWJ