ಮೈಸೂರು,ಫೆಬ್ರವರಿ,9,2021(www.justkannada.in): ಸುತ್ತೂರು ಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಭಾಷಣದ ವೇಳೆ ಹಳೆ ನೆನಪು ಮೆಲುಕು ಹಾಕಿದರು.
ನಾನು ವೀರ ಮಕ್ಕಳ ಕುಣಿತದಲ್ಲಿ ನಂಬರ್ 1. ಸುತ್ತೂರು ಪಕ್ಕದ ಬೆಳಗುಂದ ಗ್ರಾಮದಲ್ಲಿ ವೀರ ಮಕ್ಕಳ ಕುಣಿತ ಕುಣಿಯಲು ಬಂದಿದ್ದೆ. ವಾಪಸ್ ಬರುವಾಗ ಸುತ್ತೂರಿನಲ್ಲು ರಾಜೇಂದ್ರ ಸ್ವಾಮಿಗಳ ಭೇಟಿ ಮಾಡಿದ್ದೆವು. ಮೊದಲ ಭೇಟಿಯಲ್ಲಿ ಅವರ ಮುಂದೆ ವೀರ ಮಕ್ಕಳ ಕುಣಿತ ಕುಣಿದೆವು. ಅದಕ್ಕೆ ಮೆಚ್ಚಿ ಅವರು 5 ರೂಪಾಯಿ ಹಣ ಕೊಟ್ಟರು. ಅದರಲ್ಲಿ ನಾನು ಒಂದು ಕುರಿ ಕೊಂಡು ಸಾಕಿದೆ. ಅದರಲ್ಲಿ ಸಾಕಷ್ಟು ಲಾಭ ಗಳಿಸಿದೆ ಎಂದು ಭಾಷಣದಲ್ಲಿ ಸಿದ್ದರಾಮಯ್ಯ ಹಳೆಯ ನೆನಪು ಮೆಲುಕು ಹಾಕಿದರು.
ತಮ್ಮ ಶಾಲಾ ದಿನದ ಮೆಲುಕು ಹಾಕಿದ ಸಿದ್ದರಾಮಯ್ಯ, ಆಗ ನನ್ನ ಸ್ನೇಹಿತ ಮಠಕ್ಕೆ ಊಟಕ್ಕೆ ಕರೆದುಕೊಂಡು ಬಂದಿದ್ದ. ನಾನು ಆಗ ಮೈಸೂರಿನಲ್ಲಿ ಓದುತ್ತಿದ್ದೆ. ಮಠದ ಒಂದೊಂದು ಅನುಭವ ಅಮೂಲ್ಯವಾದದ್ದು. ಅಂತರ್ ಜಾತಿ ಅಂತರಧರ್ಮ ಮದುವೆಗಳು ಆಗಬೇಕು ಎಂದರು.
ನಾವೆಲ್ಲ ಮನುಷ್ಯರು ಕುವೆಂಪು ಮಾತುಗಳ ಉಲ್ಲೇಖ ಮಾಡಿದ ಸಿದ್ದರಾಮಯ್ಯ, ಹುಟ್ಟಿದ ಮಕ್ಕಳಿಗೆ ಜಾತಿ ಗೊತ್ತಿರುವುದಿಲ್ಲ. ನಾವು ಮಕ್ಕಳಿಗೆ ಜಾತಿ ಹೇಳಿಕೊಡುತ್ತೇವೆ. ಜಾತಿ ಮೀರಿದವನು ವಿಶ್ವಮಾನವನಾಗುತ್ತಾನೆ. ಜಾತಿ ಮಾಡಿದವನು ಅಲ್ಪ ಮಾನವನಾಗುತ್ತಾನೆ. ಕೊರೊನಾ ವೇಳೆ ಸರಳ ಮದುವೆ ಚೆನ್ನಾಗಿತ್ತು, ಅದೇ ಮುಂದುವರಿದಿದ್ದರೆ ಚೆನ್ನಾಗಿತ್ತು. ಆದರೆ ಈಗ ಮತ್ತೆ ಆಡಂಬರದ ಮದುವೆ ಆರಂಭವಾಗಿದೆ. ನಾನು ಸಾಕಷ್ಟು ಮದುವೆ ಮಾಡಿದ್ದೇನೆ. ಆದರೆ ನಾನು ನಮ್ಮ ಊರು ಬಿಟ್ಟು ಒಂದು ಮದುವೆ ಮಾಡಿಲ್ಲ. ಎಲ್ಲವೂ ಸರಳವಾಗಿ ಮಾಡಿದ್ದೇನೆ. ಮದುವೆ ಸರಳವಾಗಿರಬೇಕು ಎಂದು ಸಿದ್ಧರಾಮಯ್ಯ ತಿಳಿಸಿದರು.
ಮದುವೆ ಅಡುಗೆಯ ಬಗ್ಗೆಯೂ ಉಲ್ಲೇಖಿಸಿದ ಸಿದ್ಧರಾಮಯ್ಯ ಈಗ ಮದುವೆಯಲ್ಲು 30 ರಿಂದ 50 ತಿಂಡಿ ಮಾಡುತ್ತಾರೆ. ಒಂದನ್ನೂ ತಿನ್ನಲು ಆಗುವುದಿಲ್ಲ ಇದು ನ್ಯಾಷನಲ್ ವೇಸ್ಟ್ ಅಷ್ಟೇ ಎಂದರು.
ಮದುವೆ ಮಾಡಿಕೊಳ್ಳಿ ಮಕ್ಕಳು ಕಡಿಮೆ ಮಾಡಿಕೊಳ್ಳಿ. ಎಲ್ಲಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಲ್ಲರೂ ಚೆನ್ನಾಗಿರಿ ಎಂದು ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ನವ ಜೋಡಿಗಳಿಗೆ ವಿಶೇಷವಾಗಿ ಶುಭ ಹಾರೈಸಿದರು.
Key words:sheep – five rupees -Former CM- Siddaramaiah – old-time- reliever-suttur math