ಬೆಂಗಳೂರು,ಅಕ್ಟೋಬರ್,26,2024 (www.justkannada.in): ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂಪೀರ್ ಖಾದ್ರಿ ಅವರನ್ನ ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಸಫಲರಾಗಿದ್ದಾರೆ.
ನವೆಂಬರ್ 13 ರಂದು ಹಾವೇರಿಯ ಶಿಗ್ಗಾಂವಿ, ರಾಮನಗರದ ಚನ್ನಪಟ್ಟಣ, ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಣಕ್ಕಿಳಿದಿದ್ದು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಜ್ಜಂಪೀರ್ ಖಾದ್ರಿ ಅವರ ಜತೆ ಮಾತುಕತೆ ನಡೆಸಿ ನಂತರ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಕರೆತಂದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಖಾದ್ರಿ ಅವರ ಜೊತೆಗೆ ಸಂಧಾನ ಸಕ್ಸಸ್ ಆಗಿದ್ದು ನಾಮಪತ್ರ ವಾಪಸ್ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್ ಪಡೆಯುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
Key words: shiggaon, by-election, CM Siddaramaiah, rebel candidate