ಶಿವಮೊಗ್ಗ,ಮೇ,29,2021(www.justkannada.in): ದಿನಾಂಕ 31-05-2021ರ ಬೆಳಿಗ್ಗೆ 10 ಗಂಟೆಯಿಂದ 7-06-2021ರ ವರೆಗೆ ಶಿವಮೊಗ್ಗ ಜಿಲ್ಲೆಯು ಸಂಪೂರ್ಣವಾಗಿ ಸ್ತಬ್ಧವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಕೂಡ, ಕೋವಿಡ್ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕೂಡ, ಲಾಕ್ ಡೌನ್ ಹೇರಿದ್ದರೂ ಕೂಡ ಜನರ ದಿನನಿತ್ಯದ ಓಡಾಟದಲ್ಲಿ ಬದಲಾಗಿಲ್ಲ. ಕಾರಣ ಜಿಲ್ಲಾಡಳಿತದ ತೀರ್ಮಾನದಂತೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ಎಷ್ಟು ಹೇಳಿದರೂ ಕೂಡ ಜನ ಓಡಾಟ ಮಾಡೇ ಮಾಡುತ್ತಿದ್ದಾರೆ ಎಂದರು.
ಕೆಲವು ಜೀವಗಳು ಹೋಗುತ್ತಿವೆ. . ನಮ್ಮ ಬಂಧುಗಳು, ಸ್ನೇಹಿತರು ಮತ್ತು ನಮ್ಮ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಿದ್ದರೂ ಸಹ ಜನತೆ ಓಡಾಟ ಕಡಿಮೆ ಮಾಡಿಲ್ಲ . ಹೀಗೇಕೆ ಅಂತ ಗೊತ್ತಾಗ್ತಾ ಇಲ್ಲ. ಜನತೆಗೆ ಕೈಮುಗಿದೀವಿ, ಕಾಲಿಗೆ ಬಿದ್ದೀವಿ ಎಲ್ಲಾ ರೀತಿಯ ವಿನಂತಿ ಮಾಡಿಕೊಂಡರೂ ಕೂಡ ಅವರ ಜೀವದ ಬಗ್ಗೆ ಅವರಿಗೆ ಅರಿವು ಬರುತ್ತಿಲ್ಲ. ನೀವು ಬದುಕಿ ಜನರನ್ನು ಬದುಕಲು ಬಿಡಿ ಎಂದೂ ಪರಿ ಪರಿಯಾಗಿ ಕೇಳಿಕೊಂಡರೂ ಕೂಡ, ಅವರೆಲ್ಲರೂ ಕದ್ದು ಮುಚ್ಚಿ ಓಡಾಟ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಅದಕ್ಕೆ ಈ ಬಾರಿ ಜಿಲ್ಲಾಡಳಿತ ನಿರ್ಧಾರ ಮಾಡಿ, ಲಾಕ್ ಡೌನ್ ಆದೇಶ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಅವರು ಓಡಾಡುವ ವಾಹನಗಳನ್ನು ಜಪ್ತಿ ಮಾಡಲಾಗುವುದು. ನಂತರ ವಾಹನವನ್ನ ಮುಂದೆ ಕೋರ್ಟ್ ಮುಖಾಂತರ ಬಿಡಿಸಿಕೊಳ್ಳಬೇಕಾಗುತ್ತದೆ. ವಾಹನದಲ್ಲಿ ಇರುವವರನ್ನು ಕೂಡ ಬಂಧಿಸಲಾಗುತ್ತದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು.
Key words: Shimoga -District –Complete- Lockdown – Monday- Minister- KS Eshwarappa