ಶಿವಮೊಗ್ಗ,ಜೂನ್,4,2024 (www.justkannada.in): ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸೋಲನುಭವಿಸಿದ್ದಾರೆ. ಈ ಬೆನ್ನಲ್ಲೆ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಸಾಮಾಜಿಕ ಜಾಲತಾಣದಲ್ಲಿ ಸಹೋದರ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ ಎಂದು ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ.
ಅಲ್ಲದೇ ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲ CM ಅವನನ್ನು ಸಂಪುಟ ದಿಂದ ವಜಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿರುವ ಕುಮಾರ್ ಬಂಗಾರಪ್ಪ, ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ ಎಂದು ಟೀಕಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕುಮಾರ್ ಬಂಗಾರಪ್ಪ ಹೇಳಿರುವುದಿಷ್ಟು…
‘’ಕರ್ನಾಟಕ ಕಂಡ ಧೀಮಂತ ರಾಜಕಾರಣಿ ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು ಸಾರೆಕೊಪ್ಪ ಬಂಗಾರಪ್ಪ ಹಿಂದುಳಿದ ವರ್ಗಗಳಿಗೆ ಆಶಾಕಿರಣವಾಗಿದ್ದ, ರೈತಬಂದುವೂ, ಗೇಣಿದಾರರ ಜೀವಜಲವೆನಿಸಿದ್ದ ಹೋರಾಟಗಾರ, ನಾಡು ನುಡಿ ಸಂಸ್ಕೃತಿಗಳ ರಕ್ಷಾ ಧೀಕ್ಷೆಯನ್ನು ತೊಟ್ಟಿದ್ದ ವೀರಯೋಧಸೆನಿಸಿದ್ದ ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿಯು ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು.
ಇವರ ಆಡಳಿತ ವ್ಯಖರಿಯು ಅನುಕರಣೀ ಯ ಮಾತ್ರವಲ್ಲದೆ ಆದರ್ಶರೂಪಡದ್ದಾಗಿತ್ತು. ಇವರು ಜಾರಿಗೆ ತಂದಿದ್ದ ಪಂಚಮುಖಿ ಕಾರ್ಯಕ್ರಮಗಳಾದ ವಿಶ್ವ, ಸುಶ್ರತ, ಆರಾಧನ,ಆಶ್ರಯ, ಅಕ್ಷಯ ಮುಂತಾದವನ್ನು ಇಡೀ ರಾಜ್ಯ ನೆನೆಯುತ್ತಾ ಆರಾಧಿಸುತ್ತಿದೆ, ಬೇರೆ ರಾಜ್ಯಗಳೂ ಅನುಕರಿಸುತ್ತಿವೆ.
ಇಂತಹ ಒಬ್ಬ ಧಿರೋದ್ದಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆ ಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ.
ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ!
ಮೇಲಾಗಿ,ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ.
ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ.
ಈ ವಿಜಯೋತ್ಸವದ ಕೊಡುಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದ ಮತದಾರರಿಂದ ಲಭಿಸಿದ್ದು, ಅವರಿಗೆ ನಾವು ಚಿರಖುಣಿಗಳಾಗಿರುತ್ತೇವೆ. ಅವರ ಆಶಯಗಳನ್ನು ಸಾಕಾರಗೊಳಿಸುತ್ತೇವೆ ಅವರ ನಂಬಿಕೆಗೆ ಚ್ಯುತಿಬಾರದಂತೆ ನಡೆದುಕೊಳ್ಳುತ್ತೇವೆ
ನಮ್ಮ ಪಕ್ಷದ ಕಾರ್ಯಕರ್ತರು, ಹಿರಿಯ -ಕಿರಿಯ ಪದಾಧಿಕಾರಿಗಳು, ಸಂಘಟನೆಯಲ್ಲಿ ತೊಡಗಿಸಿಕೊಂಡ ಬ್ರಿಗೇಡ್/ಶಿಸ್ತಿನ ಸಿಪಾಯಿಗಳು ಹಗಲಿರುಲೆನ್ನದೆ ದುಡಿದು ರಾಘವೇಂದ್ರರಿಗೆ ಅತ್ಯಧಿಕ ಬಹುಮತದಿಂದ ವಿಜಯಶಾಲಿಯನ್ನಾಗಿಸಿದ್ದಾರೆ ಅವರೆಲ್ಲರಿಗೂ ನನ್ನ ನಮನಗಳು.
ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಮಾರ್ಗದರ್ಶನ ನೀಡಿದ ನಾಯಕರೆಲ್ಲರಿಗೂ ಧನ್ಯವಾದಗಳು. War is over but battle remains ಅನ್ನುವ ಹಾಗೆ ನಮ್ಮ ನಿಮ್ಮೆಲ್ಲರ ಗುರಿ ZP TP ಚುನಾವಣೆಗಳು, ಇದೇ ಓಟ ನಿರಂತರವಾಗಿ ನಡೆಯಬೇಕು. ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು ಪಣತೋಡೋಣ, ಗುರಿ ಮುಟ್ಟೋಣ.
ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ಚಾಲನೆಯಗಬೇಕು. ಪಶ್ಚಿಮ ಘಟ್ಟದ ಈ ತಪ್ಪಲು ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಬೇಕು.
ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲ CM ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ.
ಅವನ ಭಾವ, ನನ್ನ ತಂಗಿಯ ಗಂಡ ಡಾ. ಶಿವರಾಜ ಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು.
ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು’’ .
Key words: Shimoga, Kumar Bangarappa, Madhu Bangarappa