ಶ್ರೀನಿವಾಸ್ ಪ್ರಸಾದ್ ಅವರ ಸಾರ್ಥಕ ಬದುಕು, ಸೈದ್ಧಾಂತಿಕ ನಿಲುವು ನಮ್ಮೊಟ್ಟಿಗಿದೆ- ಮಾಜಿ ಸಿಎಂ ಬಿಎಸ್ ವೈ.

ಮೈಸೂರು,ಮೇ,11,2024 (www.justkannada.in):  ಮನುಷ್ಯ ಹುಟ್ಟಿದಾಗ ಉಸಿರುತ್ತೆ,  ಸತ್ತಾಗ ಹೆಸರಿರುತ್ತೆ ಉಸಿರು ಇರಲ್ಲ. ನಾನು ಕಂಡ ಸ್ವಾಭಿಮಾನಿ ರಾಜಕಾರಣಿ ಈಗ  ನಮ್ಮೊಟ್ಟಿಗಿಲ್ಲ. ಶ್ರೀನಿವಾಸ್ ಪ್ರಸಾದ್ ಅವರ ಸಾರ್ಥಕ ಬದುಕು, ಅವರು ಬದುಕಿದ ಮಾರ್ಗ ಸೈದ್ಧಾಂತಿಕ ನಿಲುವು ನಮ್ಮೊಟ್ಟಿಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ಮೈಸೂರಿನಲ್ಲಿ ನಡೆದ  ದಿ.ವಿ. ಶ್ರೀನಿವಾಸ್ ಪ್ರಸಾದ್  ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ  ಬಿಎಸ್ ಯಡಿಯೂರಪ್ಪ, ಈಗ ನಾವು ಒಬ್ಬ ಹಿರಿಯ ನೇತಾರನನ್ನ ಕಳೆದುಕೊಂಡಿದ್ದೇವೆ. ಶ್ರೀನಿವಾಸ್ ಪ್ರಸಾದ್ ಸಾರ್ವಜನಿಕ ಜೀವನದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ, 2013 ರಲ್ಲಿ ರಾಜ್ಯ ಸರ್ಕಾರದ ಸಚಿವರಾಗಿಯೂ ಸೇವೆ ಅಲ್ಲಿಸಿದ್ದರು. 6 ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವುದು ಅಷ್ಟು ಸುಲಭವಲ್ಲ, ನಾನು ಪಕ್ಷಾಂತರಿಯಾಗಿರಬಹುದು  ತತ್ವಾಂತರಿಯಲ್ಲ ಎಂದು ಹೇಳುತ್ತಿದ್ದರು ಹಾಗೇ ಬುದಕಿ ತೋರಿಸಿವರು ಶ್ರೀನಿವಾಸ್ ಪ್ರಸಾದ್ . ಅವರ ಮಾತುಗಳನ್ನು ಕೇಳೋದಕ್ಕೆ ಒಂದು ಚೆಂದ. ನನ್ನ ಮತ್ತು ಅವರ ಸ್ನೇಹ ದಶಕಗಳ ಕಾಲದ್ದು. ಅವರ ಸುದೀರ್ಘ ರಾಜಕೀಯ ಸುವರ್ಣ ಮಹೋತ್ಸವವನ್ನೂ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಹೇಳಿದ ಹಾಗೆಯೇ ಸಾಮಾಜಿಕ ನ್ಯಾಯದ ಚಾಂಪಿಯನ್ ಆಗಿದ್ದರು, ಅವರ ಚಿಂತನೆ, ರಾಜಕೀಯ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಶ್ರೀನಿವಾಸ್ ಪ್ರಸಾದ್ ಅವರ ಸೈದ್ದಾಂತಿಕ ನಿಲುವು ,ಸಮಾಜವನ್ನ ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ- ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು  ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಮಾತನಾಡಿ,  ಬಾಬಾ ಸಾಹೇಬರ ಕಟ್ಟಾ ಅಭಿಮಾನಿ ಯಾರಿದ್ದಾರೋ ಅವರೆಲ್ಲಾ ಸ್ವಾಭಿಮಾನಿಗಳೇ. ಅಂಬೇಡ್ಕರ್ ಒಂದ ಕಡೆ ಸ್ವಾಭಿಮಾನಿ ಅಲ್ಲದಿದ್ದರೆ ಬದುಕಿದ್ದೇನು ಪ್ರಯೋಜನ ಅಂತ ಹೇಳಿದ್ದರು. ನಮ್ಮ ಸಮಾಜದಲ್ಲಿದ್ದ ಅಸಮಾನತೆ, ಮಾನವ ಹಕ್ಕುಗಳ ಉಲ್ಲಂಘನೆ ಇವೆಲ್ಲವುಗಳ ಬಗ್ಗೆ ಸಿಟ್ಟು ಹೊರಹಾಕುತ್ತಿದ್ದರು. ನ್ಯಾಯದಿಂದ ವಂಚಿತರಾದ, ಶೋಷಣೆಗೆ ಒಳಗಾದ ಸಮುದಾಯಗಳ ಪರವಾಗಿ ಅವರ ನಿಲುವು ಗಟ್ಟಿಯಾಗಿ ಇತ್ತು. ಸಿಎಂ ಸಿದ್ದರಾಮಯ್ಯ ಮೊದಲು ಸಿಎಂ ಆದಾಗ ರೆವಿನ್ಯೂ ಖಾತೆ ಕೊಡಲು ನನ್ನ ಕೈಯಲ್ಲೇ ಪಟ್ಟಿ ಸಿದ್ದ ಪಡಿಸಿದ್ದರು. ಆಗ ನಾನು ಕಂದಾಯ ಸಚಿವ ಖಾತೆ ಬೇಡ ಅಂತ ಹೇಳಿದ್ದೆ. ಇಲ್ಲ ಅವರು ಮೈಸೂರಲ್ಲೇ ಇದ್ದು ಪಕ್ಷ ಸಂಘಟನೆ ಮಾಡಲಿ ಎಂದು ಕಂದಾಯ ಖಾತೆಯನ್ನೇ ಕೊಟ್ಟರು. ಇಂದು ನಮ್ಮ ಮುಂದೆ ಪ್ರಸಾದ್ ಅವರು ಇಲ್ಲ. ನಾಯಕತ್ವ ಇಲ್ಲದ ಸಮುದಾಯ ಅನಾಥವಾಗಿರುತ್ತದೆ. ಹಾಗೇ ನಮ್ಮ ಸಮುದಾಯ ಅನಾಥವಾಗಿದೆ. ಅವರ ಸೈದ್ದಾಂತಿಕ ನಿಲುವು ,ಸಮಾಜವನ್ನ ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಅವರು ಮುಂದಿನ ಪೀಳಿಗೆಗೆ ಪ್ರೇರಣಾ ಶಕ್ತಿಯಾಗಬೇಕು. ಸಾರ್ಥಕವಾದ ಜರ್ನಿಯನ್ನ ಪ್ರಸಾದ್ ಅವರು ಮಾಡಿದ್ದಾರೆ, ಬುದ್ದ,ಬಸವ,ಅಂಬೇಡ್ಕರ್ ವಾದಿಗಳಾಗಿ ಸದಾ ನಿಷ್ಠೂರವಾದಿಯಾಗೇ ಬದುಕಿದ್ದವರು. ನಾವು ಕೆಲವು ಸಮಯ ಒಟ್ಟಿಗಿದ್ದೆವು, ಕೆಲವು ಸಮಯ ಬೇರೆ ಬೇರೆ ಇದ್ದವು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ತಂದಿರುವ ಹಲವು ಯೋಜನೆಗಳು ಪ್ರಸಾದ್ ಅವರ ಅಭಿಪ್ರಾಯವಾಗಿತ್ತು ಎಂದು ಹೆಚ್.ಸಿ ಮಹದೇವಪ್ಪ ಹೇಳಿದರು.

ಪ್ರಸಾದ್ ಸಾಹೇಬರು ಶುದ್ದ ಹಸ್ತ ಹೊಂದಿದ್ದ ವ್ಯಕ್ತಿ: ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ದೊಡ್ಡ ನಾಯಕ- ಪ್ರತಾಪ್ ಸಿಂಹ

ಇನ್ನು ಸಂಸದ ಪ್ರತಾಪ್ ಸಿಂಹ ಮಾತನಾಡಿ,  ಶ್ರೀನಿವಾಸ್ ಪ್ರಸಾದ್ ಅವರು ಯಾವುದೇ ನಿಲುವನ್ನ ತೆಗೆದುಕೊಳ್ಳುವಾಗ ವಸ್ತು ನಿಷ್ಠವಾಗಿ ತೆಗೆದುಕೊಳ್ಳುತ್ತಿದ್ದರೆ ಹೊರತು ಜಾತಿ ನಿಷ್ಠವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಪ್ರಸಾದ್ ಅವರ ದೇಹ ನಮ್ಮ ಜೊತೆಯಲ್ಲಿಲ್ಲ ಆದರೆ, ಅವರ ವ್ಯಕ್ತಿತ್ವ ನಮ್ಮ ಜೊತೆ ಸದಾಕಾಲ ಇರುತ್ತದೆ. ಅವರ ಅಳಿಯ ಹರ್ಷವರ್ಧನ್ ಜೊತೆ ಸಣ್ಣ ಪುಟ್ಟ ಕೋಳಿ ಜಗಳ ಆದಾಗ ಅವರು ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಅವರಲ್ಲಿದ್ದ ಉದಾರತೆ ಅಪಾರವಾದದ್ದು, ನಾನು ವಿವಾದಾತ್ಮಕ ಹೇಳಿಕೆಗಳ ಕೊಟ್ಟಾಗ ನನ್ನನ್ನ ಮನೆಗೆ ಕರೆಸಿ ಬುದ್ದಿ ಹೇಳುತ್ತಿದ್ದರು. ನನ್ನನ್ನ ಒಬ್ಬ ಮಗನ ರೀತಿ ಪ್ರೀತಿಯಿಂದ ಕಾಣುತ್ತಿದ್ದರು. ಅವರನ್ನ ಕಳೆದುಕೊಂಡಿದ್ದು ನನ್ನ ತಂದೆಯನ್ನೇ ಕಳೆದುಕೊಂಡಷ್ಟು ನೋವಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಇರಬಹುದು, ಯಡಿಯೂರಪ್ಪ ಅವರಿರಬಹುದು ಖರ್ಗೆ ಅವರಿರಬಹುದು ಇವರೆಲ್ಲರೂ ಸ್ವಂತ ಶಕ್ತಿಯ ಮೇಲೆ ಬೆಳೆದು ಬಂದವರು, ಇವರೆಲ್ಲ ನಮ್ಮಂಥವರಿಗೆ ನೀವು ಮೇಲ್ಪಂಕ್ತಿಯ ಮಾದರಿ ನಾಯಕರಾಗಿದ್ದೀರಿ ಎನ್ನುವ ಮೂಲಕ ವೇದಿಕೆಯಲ್ಲಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಬಿಎಸ್ ವೈ ಅವರನ್ನೂ ಹೊಗಳಿದರು. ಶ್ರೀನಿವಾಶ್ ಪ್ರಸಾದ್ ಸಾಹೇಬರು ಶುದ್ದ ಹಸ್ತ ಹೊಂದಿದ್ದ ವ್ಯಕ್ತಿ, ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ ದೊಡ್ಡ ನಾಯಕ. ಅವರ ಅಗಲಿಕೆ ನೋವನ್ನ ತಡೆದುಕೊಳ್ಳುವ ಶಕ್ತಿಯನ್ನ ಅವರ ಮನೆಯವರಿಗೆ ನೀಡಲಿ ಎಂದು ಹೇಳಿ ಭಾಷಣ ಮುಗಿಸಿದರು.

Key words: Shrinivas Prasad, BSY, HC Mahadevppa