ಹರಾರೆ,ಆಗಸ್ಟ್,22,2022(www.justkannada.in): ಹರಾರೆಯ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ- ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಶತಕ ಬಾರಿಸಿದ್ದಾರೆ.
ಜಿಬಾಂಬ್ವೆಗೆ ಟೀಮ್ ಇಂಡಿಯಾ 290 ರನ್ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೆ.ಎಲ್ ರಾಹುಲ್ ನಾಯಕತ್ವದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು. ಇದಕ್ಕೂ ಮುನ್ನ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 63 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬ್ರಾಡ್ ಇವಾನ್ಸ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಾಹುಲ್ (30) ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಇನ್ನು 40 ರನ್ಗಳಿಸಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದ ಶಿಖರ್ ಧವನ್ ಕೂಡ ಔಟ್ ಆದರು. 21 ಓವರ್ನಲ್ಲಿ 84 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಈ ಹಂತದಲ್ಲಿ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆಸರೆಯಾದರು.
3ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಶುಭ್ಮನ್ ಗಿಲ್ ಹಾಗೂ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ವೇಳೆ 51 ಎಸೆತಗಳಲ್ಲಿ ಗಿಲ್ ಅರ್ಧಶತಕ ಬಾರಿಸಿದ ಬ್ಯಾಟ್ ಮೇಲೆಕ್ಕೆತ್ತಿದ್ದರು. ಶುಭ್ಮನ್ ಗಿಲ್ 82 ಎಸೆತಗಳಲ್ಲಿ 12 ಫೋರ್ನೊಂದಿಗೆ ಚೊಚ್ಚಲ ಶತಕ ಪೂರೈಸಿ ಸಂಭ್ರಮಿಸಿದರು. ಶುಭ್ಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಬಾರಿಸಿ ಕೊನೆಗೆ ವಿಕೆಟ್ ಒಪ್ಪಿಸಿದರು, ಇನ್ನು ಸಂಜು ಸ್ಯಾಮ್ಸನ್ 13 ಎಸೆತಗಳಲ್ಲಿ 15 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ಅಕ್ಷರ್ ಪಟೇಲ್ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 290 ರನ್ ಗುರಿ ನೀಡಿದೆ.
Key words: Shubman Gill-century- Team India – Zimbabwe-3rd ODI