ಮೈಸೂರು,ಆಗಸ್ಟ್,8,2023(www.justkannada.in): ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಇಡೀ ರಾಜ್ಯಕ್ಕೆ ಮಾಸ್ ಲೀಡರ್. ಅವರನ್ನು ಹೆಚ್.ಡಿ ಕುಮಾರಸ್ವಾಮಿ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟಾಂಗ್ ನೀಡಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಪತ್ರ ಬರೆದಿರುವ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಎಂಟು ಮಂದಿಯ ಸಹಿಯನ್ನು ಒಬ್ಬರೇ ಮಾಡಿದ್ದಾರೆ. ಕೃಷಿ ನಿರ್ದೇಶಕರು, ಜಂಟಿ ನಿರ್ದೇಶಕರು ತಮಗೂ ಪತ್ರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಲುವರಾಯಸ್ವಾಮಿ ಒಕ್ಕಲಿಗ ಸಮುದಾಯದ ನಾಯಕ. ಐದು ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಗೆದ್ದು ಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಕುಮಾರಸ್ವಾಮಿ ಅಂಡ್ ಟೀಮ್ ಮಾತ್ರ ಒಕ್ಕಲಿಗ ಸಮುದಾಯದ ಮುಖಂಡರೇ? ಎಂದು ಚಾಟಿ ಬೀಸಿದರು.
ಕುಮಾರಸ್ವಾಮಿ ಪೆನ್ ಡ್ರೈವ್ ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ನನ್ನ ಬಳಿಯೂ ಪೆನ್ ಡ್ರೈವ್ ಇದೆ. 18 ನಿಮಿಷದ 6 ಎಪಿಸೋಡ್ ನ ಪೆನ್ ಡ್ರೈವ್ ನನ್ನ ಬಳಿಯಿದೆ. ಪೆನ್ ಡ್ರೈವ್ ನಲ್ಲಿರುವ ಮಾಹಿತಿಯನ್ನು ಕುಮಾರಸ್ವಾಮಿ ಬಹಿರಂಗ ಪಡಿಸಲಿ. ಅದಾದ ಒಂದು ಗಂಟೆಯೊಳಗೆ ನನ್ನ ಬಳಿಯಿರುವ ಪೆನ್ ಡ್ರೈವ್ ಮಾಹಿತಿ ಬಹಿರಂಗ ಪಡಿಸುತ್ತೇನೆ. ಕುಮಾರಸ್ವಾಮಿ ಹಿಟ್ ಅಂಡ್ ರನ್ ರೀತಿ ವರ್ತಿಸುತ್ತಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ನಾನೊಬ್ಬನೇ ಇರಬೇಕು ಎಂದು ಈ ರೀತಿ ಒಕ್ಕಲಿಗ ಸಮುದಾಯ ನಾಯಕರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದರಿಂದ ಕುಮಾರಸ್ವಾಮಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೊಟ್ಟ ಉರಿಯಿಂದ ಈ ರೀತಿ ಅಪಪ್ರಚಾರ ಮಾಡಲು ಮುಂದಾಗಿದ್ವಾರೆ. ನಿಮಗೆ ನಾಚಿಕೆ ಆಗಬೇಕು ಮೂಗರ್ಜಿಗಳ ಹಾಕುವವರು ಇವರೇ. ಮೂಗರ್ಜಿಗಳ ಬಗ್ಗೆ ಕ್ರಮ ಜರುಗಿಸಲು ಹೊರಟ ರಾಜ್ಯಪಾಲರು ಇವರೇ ಮೊದಲು ಎಂದು ರಾಜ್ಯಪಾಲರ ನಡೆಯ ವಿರುದ್ಧ ಎಂ. ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು.
ಪದೇ ಪದೇ ವಿದೇಶ ಪ್ರವಾಸದ ಉದ್ದೇಶವೇನು..? ಸ್ಪಷ್ಟಪಡಿಸಿ..
ಕುಮಾರಸ್ವಾಮಿ ಪದೇ ಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಉದ್ದೇಶವೇನು? ಯಾವ ಕಾರಣಕ್ಕೆ ಹೋಗ್ತಿದ್ದಾರೆಂದು ಸ್ಪಷ್ಟಪಡಿಸಲಿ. ವಿದೇಶದಲ್ಲಿ ಹಣ ಹೂಡಿಕೆಗೆ ಹೋಗುತ್ತಿದ್ದೀರಾ ಅಥವಾ ಬೇರೆ ಯಾವ ಕಾರಣಕ್ಕೆ ಹೋಗುತ್ತಿದ್ದೀರಿ ಎಂದು ಬಹಿರಂಗಪಡಿಸಿ? ಎಂದು ಎಂ.ಲಕ್ಷ್ಮಣ್ ಸವಾಲು ಹಾಕಿದರು.
ಎಸ್ ಸಿ., ಎಸ್.ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಗಳಿಗೆ ಬಳಕೆ ಆರೋಪಕ್ಕೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ಇದಕ್ಕೆ ಬಿಜೆಪಿಯೇ ಕಾರಣ. ಸಚಿವರಾಗಿದ್ದ ಗೋವಿಂದ ಕಾರಜೋಳ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ ಸಿ, ಎಸ್. ಟಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆ ರೀತಿ ಮಾಡಿಲ್ಲ. ಅನ್ಯ ಉದ್ದೇಶಕ್ಕೆ ಎಸ್ ಸಿ, ಎಸ್ ಟಿ ಅನುದಾನ ಬಳಕೆ ಮಾಡಿಕೊಂಡಿಲ್ಲ. ಆದರೆ ಬಿಜೆಪಿಯವರು ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
Key words: Siddaramaiah-DK shivakumar- mass leader –kpcc-M. Laxman