ವಿದ್ಯಾರ್ಥಿನಿ ಪ್ರತಿಕ್ಷ ಪಾವಸ್ಕರ್ ಗೆ ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕ

ಮೈಸೂರು,ಫೆಬ್ರವರಿ,3,2025 (www.justkannada.in): 2024-25 ರಲ್ಲಿ  ಬೆಂಗಳೂರಿನ  ವಿದ್ಯಾರ್ಥಿನಿ ಪ್ರತಿಕ್ಷ ಪಾವಸ್ಕರ್  ಅವರು ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ  ಅಧ್ಯಕ್ಷ ಡಾ.ಬಿಜೆ. ವಿಜಯ್ ಕುಮಾರ್ ಅಧ್ಯಕ್ಷತೆಯಲ್ಲಿ  ಜಿಲ್ಲೆಯ ಪದಾಧಿಕಾರಿಗಳು  6.8.2022  ರಂದು  ಸಭೆ ಸೇರಿ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಅಮೃತ ಮಹೋತ್ಸವದ   ಸಂದರ್ಭದಲ್ಲಿ  ಮೈಸೂರು ವಿಶ್ವವಿದ್ಯಾನಿಲಯಕ್ಕೆ  ಶಾಶ್ವತ ಚಿನ್ನದ ದತ್ತಿ ನೀಡುವ  ನಿರ್ಣಯವನ್ನ ಅಂಗೀಕರಿಸಿತ್ತು.

ಅದರಂತೆ  ಪ್ರತಿ ವರ್ಷ ಘಟಿಕೋತ್ಸವ   ಸಂದರ್ಭದಲ್ಲಿ BA, LLB ಐದು ವರ್ಷದ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ   ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಚಿನ್ನದ ಪದಕ  ನೀಡುತ್ತಾ ಬಂದಿದ್ದು, 2022-23 ರಲ್ಲಿ ಶ್ರೀರಂಗಪಟ್ಟಣದ ವಿನಯ್   ಚಿನ್ನದ ಪದಕ ಪಡೆದಿದ್ದು  ನಂತರದ 2024 25 ರಲ್ಲಿ  ಬೆಂಗಳೂರಿನ ಕುಮಾರಿ ಪ್ರತಿಕ್ಷ ಪಾವಸ್ಕರ್  ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ .

ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್  ಸಮಿತಿ   ಸಿಎಂ ಸಿದ್ದರಾಮಯ್ಯಗೆ ಈ ವಿಷಯ ತಿಳಿಸಿದ್ದು, ಈ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ  ಸ್ವತಃ ಪ್ರತಿಕ್ಷಾ ಅವರನ್ನ ಮೈಸೂರಿನ ತಮ್ಮ ನಿವಾಸಕ್ಕೆ  ಕರೆಸಿ  ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,   ನನ್ನ ಹೆಸರಿನಲ್ಲಿ  ಚಿನ್ನದ ಪದಕದ  ದತ್ತಿ ನೀಡಿದ್ದು ನನಗೆ ಗೊತ್ತಿರಲಿಲ್ಲ, ಆದರೆ ಜಿಲ್ಲಾ ಕಾಂಗ್ರೆಸ್ ಸಮಿತಿ  ಪ್ರತಿಭಾನ್ವಿತರನ್ನ ಪ್ರೋತ್ಸಾಹಿಸುವ ಈ ಉದ್ದೇಶ  ತುಂಬಾ  ಉತ್ತಮ ಬೆಳವಣಿಗೆ. ಹಾಗೆಯೇ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯವೈಖರಿ ಹಾಗೂ  ಕಳೆದ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಶ್ರಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರ  ಪ್ರಾಮಾಣಿಕ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೆಯೇ ಮೈಸೂರಿನ ರೈಲ್ವೆ ನಿಲ್ದಾಣದ ಪಕ್ಕದ  ಖಾಲಿ ಜಾಗದಲ್ಲಿ  ಕಾಂಗ್ರೆಸ್  ಭವನಕ್ಕೆ ಮುಂಬರುವ  ಮಾರ್ಚ್ 15 ರಂದು  ಶಂಕು  ಸ್ಥಾಪನೆ ನೆರವೇರಿಸಲಾಗುತ್ತದೆ.   ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು  ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿಜೆ. ವಿಜಯಕುಮಾರ್  ಹಾಗೂ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ  ಎಂಎಲ್ ಸಿ ಡಾ. ಯತೀಂದ್ರ ಸಿದ್ದರಾಮಯ್ಯ , ಶಾಸಕರಾದ ಹರೀಶ್ ಗೌಡ, ರಮೇಶ್ ಬಂಡಿ ಸಿದ್ದೇಗೌಡ, ಎಆರ್. ಕೃಷ್ಣಮೂರ್ತಿ ,  ಮಾಜಿ ಸಚಿವರಾದ ಕೋಟೆ ಶಿವಣ್ಣ  ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.

Key words: mysore, Siddaramaiah gold medal, Student, Pratiksha Pawaskar