ಮೈಸೂರು,ಮೇ,22,2019(www.justkannada.in): ತಮ್ಮ ವಿರುದ್ದ ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರೋಷನ್ ಬೇಗ್ ಅಧಿಕಾರದ ದಾಹದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ರೋಷನ್ ಬೇಗ್ ಮಂತ್ರಿಗಿರಿಗೂ ಆಸೆ ಪಟ್ಟಿದ್ರು. ಜೊತೆಗೆ ಲೋಕಸಭಾ ಟಿಕೆಟ್ ಕೂಡ ಸಿಗಲಿಲ್ಲ. ಇದರಿಂದ ಆ ರೀತಿ ಮಾತನಾಡಿದ್ದಾರೆ. ಅದಕ್ಕೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂಬ ಹೆಚ್. ವಿಶ್ವನಾಥ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿಲು ನಿರಾಕರಿಸಿದ ಸಿದ್ದರಾಮಯ್ಯ, ಎಚ್.ವಿಶ್ವನಾಥ್ ನಮ್ಮ ಪಕ್ಷದವರಲ್ಲ. ಅವರು ನೀಡುವ ಹೇಳಿಕೆಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಇಡುತ್ತೇನೆ ಎಂದರು.
ಮೈಸೂರಿನ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಹಳ್ಳಿಯವನು, ನನ್ನ ಭಾಷೆ ಹೊರಟು. ಆದ್ರೆ ನನ್ನನ್ನು ದುರಂಕಾರಿ ಎನ್ನುತ್ತಾರೆ. ಸೋಗಲಾಡಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಸ್ವಾಭಿಮಾನಿಗಳು ಮಾತನಾಡುವುದಿಲ್ಲ. ನಿರಭಿಮಾನಿಗಳು ಈ ರೀತಿ ಮಾತನಾಡುತ್ತಾರೆ. ಆದ್ರೆ ನಾನು ಯಾವತ್ತು ಆ ರೀತಿ ನಡೆದುಕೊಂಡಿಲ್ಲ ಎಂದರು.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ವಿರೋಧ….
ಇದೇ ವೇಳೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇಡೀ ರಾಜ್ಯದಲ್ಲಿ ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆರ್ಥಿಕವಾಗಿ ಹಿಂದುಳಿದವರೂ ತಮ್ಮ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯಲಿ ಎಂದು ಆಸೆ ಪಡುತ್ತಾರೆ. ಕನ್ನಡ ಭಾಷೆ ಬೇರೆ, ಮಾಧ್ಯಮ ಬೇರೆ. ಇಂಗ್ಲಿಷ್ ಅನ್ನು ಭಾಷೆಯನ್ನಾಗಿ ಕಲಿಯಲು ಯಾರ ವಿರೋಧವೂ ಇಲ್ಲ. ಆದ್ರೆ ಇಂಗ್ಲಿಷ್ ಮಾಧ್ಯಮ ಬೇಡ ಎನ್ನುತ್ತಿದ್ದೇವೆ.ಈ ಬಗ್ಗೆ ಕೆಲವರಿಗೆ ಗೊಂದಲ ಇದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಿರರ್ಗಳವಾಗಿ ಮಾತನಾಡಬಹುದು. ಆದ್ರೆ ಹೃದಯದ ಭಾಷೆ ಆಗಲಾರದು ಎಂದು ನುಡಿದರು.
ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗಲ್ಲ. ನಾವು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಿಕೊಂಡಿದ್ದೇವೆ. ಅದರಲ್ಲಿ ಈ ವಿಚಾರ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ.ಆದ್ದರಿಂದ ಮುಖ್ಯಮಂತ್ರಿಯೊಂದಿಗೆ ನಾನು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಕಾರಣ ಶಿಕ್ಷಣದ ಗುಣಮಟ್ಟ ಕಡಿಮೆ ಇರೋದು.ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುತ್ತಲೇ ಇದೆ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೆ ಹೋದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಕೆಳ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮಾನತೆ ಬಂದರೆ ಜಾತಿ ವ್ಯವಸ್ಥೆ ಕ್ರಮೇಣ ಕಡಿಮೆ ಆಗುತ್ತೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಇವಿಎಂ ಮೇಲೆ ಬಲವಾದ ಅನುಮಾನ ಇದೆ
ನನಗೆ ಇವಿಎಂ ಮೇಲೆ ಬಲವಾದ ಅನುಮಾನ ಇದೆ. ಇವಿಎಂ ಸಾಫ್ಟ್ ವೇರ್ ಮೇಲೆ ಕೆಲಸ ಮಾಡುತ್ತೆ. ಹೀಗಾಗಿ ಟ್ಯಾಂಪರ್ ಆದರೂ ಆಶ್ಚರ್ಯ ಪಡಬೇಕಿಲ್ಲ. ಬಿಜೆಪಿ ಅವರು ಬೈ ಎಲೆಕ್ಷನ್ ಗಳಲ್ಲಿ ಇವಿಎಂ ಟ್ಯಾಂಪರ್ ಮಾಡಲ್ಲ. ಜನರಲ್ ಎಲೆಕ್ಷೆನ್ ಗಳಲ್ಲಿ ಬಿಜೆಪಿ ಅವರು ಟ್ಯಾಂಪರ್ ಮಾಡ್ತಾರೆ. ಬೈ ಎಲೆಕ್ಷನ್ ಗಳಲ್ಲಿ ನಮ್ಮ ಪರ ವೋಟ್ ಬರುತ್ತೆ. ಆದ್ರೆ ಸಾರ್ವತ್ರಿಕ ಚುನಾವಣೆಯಲ್ಲಿ ಯಾಕೆ ಬರಲ್ಲ. ಹೀಗಾಗಿ ನನಗೆ ಇವಿಎಂ ಗಳ ಮೇಲೆ ಅನುಮಾನ ಇದೆ ಎಂದು ಸಿದ್ದರಾಮಯ್ಯ ಸಂಶಯ ವ್ಯಕ್ತಪಡಿಸಿದರು.
ಬಸವಣ್ಣ ಹೇಳಿರುವುದನ್ನು ನಾನು ಹೇಳಿದ್ದೇನೆ. ಇದನ್ನು ನಾನು ಹೇಳಿದ್ರೆ ನಾನು ಲಿಂಗಾಯತ ವಿರೋಧ ಅಂತಾರೆ. ಲಿಂಗಾಯತ ಧರ್ಮದ ವಿಚಾರವಾಗಿ ಗಿರಾಕಿಗಳು ಅವರೆ ಕೇಳಿದ್ರು. ವಿರಕ್ತ ಪರಂಪರೆಯವರು ಬಂದು ಲಿಂಗಾಯತ ಧರ್ಮ ಮಾಡಿ ಎಂದು ಕೇಳಿಕೊಂಡಿದ್ದರು. ಗುರು ಪರಂಪರೆಯವರು ವೀರಶೈವ ಲಿಂಗಾಯತ ಎಂದು ಮಾಡಿ ಎಂದಿದ್ರು. ಇದಕ್ಕಾಗಿ ಕ್ಯಾಬಿನೆಟ್ ನಲ್ಲಿ ಅದನ್ನು ತಿದ್ದುಪಡಿ ಮಾಡಿ ಕಳುಹಿಸಿದ್ವಿ. ಆದರೆ ನನ್ನನ್ನ ಲಿಂಗಾಯತ ವಿರೋಧಿ ಎಂದು ಪಟ್ಟ ಕಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
Key words: siddaramaiah is Oppose to English Media Teaching in Government Schools.
#mysore #siddaramaiah #hvishwanath #roshanbeg