ಮೈಸೂರು, ಏಪ್ರಿಲ್ 16, 2023 (www.justkannada.in): ನಾಮಪತ್ರ ಸಲ್ಲಿಕೆಗೆ ಇನ್ನು ಕಾಲಾವಕಾಶವಿದೆ. ಶೀಘ್ರ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇನೆ. ಸೀಟ್ ತಪ್ಪಿಸಿದಕ್ಕೆ ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನನಗೆ ಟಿಕೆಟ್ ಕೈ ತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ ಸವದಿ ವಿರುದ್ಧ ಪ್ರತಿಪಕ್ಷ ನಾಯಕರು ಸದನದಲ್ಲೇ ಗಲಾಟೆ ಮಾಡಿದ್ದರು. ಈಗ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಟ್ಟಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಜಾತಿ ರಾಜಕಾರಣವನ್ನ ನಾನು ವಿರೋಧಿಸಿದೆ. ಸಂಪೂರ್ಣ 5 ವರ್ಷ ಅಧಿಕಾರ ನಡಸಿದ ಕಾಂಗ್ರೆಸ್ 2018 ರಲ್ಲಿ ಸೋಲು ಕಂಡಿತು. ಇದಕ್ಕೆ ಜಾತಿ ರಾಜಕಾರಣ ಕಾರಣವಾಗಿತ್ತು. 2018ರಲ್ಲಿ ನನ್ನ ಸೋಲಿಸಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಕಡೆ ಇದ್ದವರೆಲ್ಲ ನನ್ನ ವಿರೋಧ ಕೆಲಸ ಮಾಡಿದರು. ಆದರೆ ಪಕ್ಷದಲ್ಲಿ ಇದಕ್ಕೆ ಯಾವುದೇ ಕ್ರಮ ಆಗಲಿಲ್ಲ. ಆದರೆ ಎನ್ಆರ್. ಕ್ಷೇತ್ರದಲ್ಲಿ ಸತ್ಯ ಮಾತನಾಡಿದ ಶಾಹಿದ್ ನನ್ನ ತೆಗೆದು ಹಾಕಿದ್ರು. ಹುಲಿ ಬಾಯಿಗೆ ಮಗು ಸಿಕ್ಕ ಹಾಕಿಕೊಂಡಿದೆ. ಜೋಪಾನವಾಗಿ ಮಗುವನ್ನು ಬಿಡಿಸಿಕೊಳ್ಳಬೇಕು ಎಂದ ವಾಸು ಸಿದ್ದರಾಮಯ್ಯ ಅವರನ್ನ ಹುಲಿಗೆ, ಪಕ್ಷವನ್ನ ಮಗುವಿಗೆ ಹೋಲಿಸಿದರು.
ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದಲ್ಲೂ ಜೀತದಾಳು ಪದ್ದತಿ ಇದೆ. ನೀನು ಮಾಡಿದ್ದೇ ಸರಿ ಅಣ್ಣ, ನಿನ್ನ ಕುದುರೆ ಓಡುತ್ತೆ ಅಣ್ಣ ಅಂತಾರೆ. ಕೆಲವರಿಗೆ ಗೆಲ್ಲಿಸುವ ಶಕ್ತಿ ಇರುತ್ತೆ. ಅವರ ಬಗ್ಗೆ ಪಕ್ಷದಲ್ಲಿ ಗೌರವ ಇರುತ್ತೆ. ಆದರೆ ಕೆಲವರಿಗೆ ಸೋಲಿಸುವ ಶಕ್ತಿ ಇರುತ್ತೆ. ಅಂಥವರನ್ನು ಕಂಡರೆ ಪಕ್ಷಗಳಿಗೆ ಭಯ. ಸಿದ್ದರಾಮಯ್ಯ ಅವರನ್ನು ಸೋಲಿಸುವ ನಾಯಕ ಎಂದ ವಾಸು ಕಿಡಿಕಾರಿದರು.
ಯಾರ ವೈಯುಕ್ತಿಕ ಹಠನೋ, ಚಟನೋ ಗೊತ್ತಿಲ್ಲ. ನನಗೆ ಟಿಕೆಟ್ ಮಿಸ್ ಆಗಿದೆ. ನನ್ನ ಹೆಸರನ್ನು ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಸೂಚಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ವಾಸು ಹೇಳಿದರು.
ಮೇಯರ್, ಸಹಕಾರ ಮಹಾಮಂಡಲ, ಶಾಸಕ, ಸಿಎಂ ಕಾರ್ಯದರ್ಶಿ ಹೀಗೆ ಎಲ್ಲ ಹಂತದಲ್ಲೂ ದುಡಿದು ಪಕ್ಷದ ಸಾಮರ್ಥ್ಯ ಹೆಚ್ಚಿಸಿದ್ದೇನೆ. 1999, 2008, 2018ರಲ್ಲಿ ಸೋತಾಗಲೂ ಪಕ್ಷಕ್ಕೆ ಬಲ ತಂದು ಕೊಟ್ಟಿದ್ದೇನೆ. 2013ರಲ್ಲಿ ಶಾಸಕನಾಗಿ ಆಸ್ಪತ್ರೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಐದು ಜಿಲ್ಲೆಗೆ ಅನುಕೂಲ ಆಗುವ ಅಭಿವೃದ್ಧಿ ಮಾಡಿದ್ದೇನೆ. ನಾನು ಒಂದು ವರ್ಗಾವಣೆ ಕೇಳಿಲ್ಲ. ಇದು ಗಿನ್ನಿಸ್ ರೆಕಾರ್ಡ್ ಬುಕ್ಗೆ ಬೇಕಾದರೂ ಸೇರಿಸಬಹುದು. ಮೂಲಸೌಕರ್ಯದ ಬಗ್ಗೆ ಮಾತ್ರ ಕೇಳಿದ್ದೇನೆ. ಟಿಕೆಟ್ ಮಿಸ್ ಆಗಿದ್ದಕ್ಕೆ ನನಗೆ ಬೇಸರ ಇಲ್ಲ. ಸೋತಾಗಲೂ ನಾನು ಕುಗ್ಗಿಲ್ಲ. ನನಗಿದ್ದ ದೂರದೃಷ್ಟಿಗಳನ್ನು ಈಡೇರಿಸಲು ಆಗಲಿಲ್ಲ ಅನೋ ಬೇಸರ ಇದೆ ಎಂದು ಹೇಳಿದರು.
ಹಲವು ದಿನಗಳಿಂದ ಟಿಕೆಟ್ ಬಗ್ಗೆ ವಾದವಿವಾದಗಳು ನಡಿತಾ ಇದ್ದವು. 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ರೆ ನಾನು ನಿವೃತ್ತಿಗೆ ರೆಡಿ, ಡಂಡ ಕಟ್ಟಲು ಸಿದ್ಧ. ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿಯಾಗಲಿ ಸಾರ್ವಜನಿಕ, ಸರ್ಕಾರದ ಪ್ರಾಪರ್ಟಿಯನ್ನ ಅನಧಿಕೃತ ತೆಗೆದುಕೊಂಡಿದ್ರೆ ನಾನು ಸರ್ಕಾರಕ್ಕೆ ಬರೆದು ಕೊಡ್ತೀನಿ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ತಪ್ಪಿಸಿದ್ದವ್ರಿಗೆ ದೇವರು ಸನ್ಮಾರ್ಗ ಕೊಡಲಿ. ನನಗೆ ಈ ವರೆಗೆ ಅವಕಾಶ ಕೊಟ್ಟ ಪಕ್ಷವನ್ನು ನಾನೂ ದೂರೋದಿಲ್ಲ. ನನಗೆ ಬಹಳ ಒತ್ತಡವಿದೆ. ನಮ್ಮ ಪಕ್ಷಕ್ಕೆ ಬನ್ನಿ ಅಂತ ಹಲವರು ಕರೆಯುತ್ತಿದ್ದಾರೆ. ಎರಡು ದಿನಗಳಲ್ಲಿಈ ಕುರಿತು ತಿರ್ಮಾನ ಮಾಡ್ತೀನಿ. ಪಕ್ಷ ಬಿಡೋದ್ರಿಂದ ನನಗೆ ಬಂದಿದವ್ರಿಗೆ ಅನ್ಯಾಯ ಆಗುತ್ತೆ. ಪಕ್ಷದಲ್ಲಿ ನನಗೆ ಸಪೋರ್ಟ್ ಮಾಡಿದವ್ರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಾನು ಪಕ್ಷ ಬಿಡೋದಿಲ್ಲ. ಪಕ್ಷದಲ್ಲಿ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವ್ರನ್ನ ಖಂಡಿಸೋದು ದ್ವೇಷಿಸೋದು ನಿಜ. ಸೀಟ್ ತಪ್ಪಿಸೋದ್ರಿಂದ ನನ್ನ ವಾಯ್ಸ್ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂದರು.