ಮೈಸೂರು,ಡಿಸೆಂಬರ್,26,2024 (www.justkannada.in) ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಪರ ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ಇದೇ ರಸ್ತೆಗೆ ಪ್ರಿನ್ಸೆಸ್ ರೋಡ್’ ಎಂಬ ಹೆಸರಿದೆ.
ಹೌದು ಸರ್ಕಾರಿ ದಾಖಲೆ, ವೆಬ್ ಸೈಟ್ ಗಳಲ್ಲಿ ಈ ರಸ್ತೆಗೆ ಪ್ರಿನ್ಸೆಸ್ ರೋಡ್ ಎಂದು ಉಲ್ಲೇಖ ಮಾಡಲಾಗಿದೆ. ಕೇಂದ್ರ ಸರ್ಕಾರದ ರೈಲ್ವೆ ಮ್ಯೂಸಿಯಂ ವೆಬ್ ಸೈಟ್, ಅಂಚೆ ಕಚೇರಿಯ ವಿಳಾಸದಲ್ಲಿ ಪ್ರಿನ್ಸೆಸ್ ರೋಡ್ ಎಂದು ಉಲ್ಲೇಖವಿದೆ. 1912 ರಿಂದಲೂ ಈ ರಸ್ತೆಯನ್ನ ಪ್ರಿನ್ಸೆಸ್ ರೋಡ್’ ಎಂದು ಕರೆಯಲಾಗುತ್ತಿದ್ದು ಅಧಿಕೃತ ವೆಬ್ ಸೈಟ್ ದಾಖಲೆಗಳು ಲಭ್ಯವಾಗಿವೆ.
2014 ರಿಂದ ಪ್ರಿನ್ಸೆಸ್ ರಸ್ತೆ ಹೆಸರಿಗಾಗಿ ಡಾ.ಎಸ್.ಪಿ.ತಿರುಮಲರಾವ್ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಪ್ರಾಚ್ಯವಸ್ತು ಇಲಾಖೆಯಿಂದಲೂ ಪ್ರಿನ್ಸೆಸ್ ರಸ್ತೆಯೆಂದು ಉಲ್ಲೇಖ ಮಾಡಲಾಗಿದ್ದು, ಈ ಕುರಿತು ಸಿಂಹದಮರಿ ಸೈನ್ಯ ಎಂಬ ಸಂಘ ಹೋರಾಟ ಮಾಡಿತ್ತು. ಇದೀಗ ಗ್ರಾಹಕರ ಪರಿಷತ್ ವೇದಿಕೆಯಿಂದಲೂ ಈ ರಸ್ತೆಯ ಹೆಸರು ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ.
ಪ್ರಿನ್ಸೆಸ್ ರಸ್ತೆ ಹೆಸರಿಗಾಗಿ ಹೋರಾಟ ಮಾಡಿದ್ದ ಡಾ.ಎಸ್.ಪಿ.ತಿರುಮಲರಾವ್ ಬದುಕಿರುವ ತನಕ ಸುಮ್ಮನಿದ್ದ ಪಾಲಿಕೆ ತಿರುಮಲರಾವ್ ಮೃತರಾದ ಕೆಲವೇ ದಿನಗಳಲ್ಲಿ ಹೆಸರು ಬದಲಾವಣೆಗೆ ಮುಂದಾಗಿದೆ. ಪಾಲಿಕೆ ಅಧಿಕಾರಿಗಳ ಈ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ನಡೆಗೆ ಮೈಸೂರಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ವಕೀಲ ವಿ.ರವಿಕುಮಾರ್ ಅವರು ಲೀಗಲ್ ನೋಟಿಸ್ ನೀಡಿದ್ದಾರೆ.
Key words: CM Siddaramaiah, name, Mysore, ‘Princess Road’