ಮೈಸೂರು,ಸೆಪ್ಟಂಬರ್, 20,2024 (www.justkannada.in): ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿ ಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರ ಸರ್ಕಾರದ ಮಾನ್ಯ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
ಇಂದು ಕೇಂದ್ರ ರೇಷ್ಮೆ ಮಂಡಳಿಯ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ “ಕೇಂದ್ರ ರೇಷ್ಮೆ ಮಂಡಳಿಯ ಪ್ಲಾಟಿನಮ್ ಜುಬಿಲಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ 27 ರಾಜ್ಯಗಳ ರೈತರು ತಮ್ಮನ್ನು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿಯೂ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮೈಸೂರು ಭಾಗದಲ್ಲಿ ಅಭಿವೃದ್ಧಿ ಹೊಂದಲು ಮೈಸೂರು ಅರಸರ ಕೊಡುಗೆ ಹೆಚ್ಚು ಎಂದರು.
ಕರ್ನಾಟಕದಲ್ಲಿ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಚೀನಾದಲ್ಲಿ ಹೆಚ್ಚಿನ ರೇಷ್ಮೆ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತವು ರೇಷ್ಮೆ ಬೆಲೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೇಷ್ಮೆ ಬೆಳೆಯು ಕಳೆದ ಎರಡು ಮೂರು ವರ್ಷಗಳಿಂದ ಉತ್ತಮವಾದ ಬೆಲೆ ಸಿಗುತ್ತಿದ್ದು, ರೇಷ್ಮೆ ಬೆಳೆಗಾರರು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರವು 1.52 ಲಕ್ಷ ಕೋಟಿ ಹಣವನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗಿದೆ. ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ರೈತರ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತವೆ. ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರು ಆತ್ಮ ವಿಶ್ವಾಸದಿಂದ ಜೀವನ ನಡೆಸಬೇಕು ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಶ್ಯಾಮ್ ಪ್ರಕಾಶ್ ಮುಖರ್ಜಿ ಅವರ ದೂರ ದೃಷ್ಟಿಯಿಂದ ಕೇಂದ್ರೀಯ ರೇಷ್ಮೆ ಮಂಡಳಿ ಪ್ರಾರಂಭವಾಯಿತು. ಈ ಮಂಡಳಿಯ ಪ್ರಾರಂಭದಿಂದ ರೇಷ್ಮೆ ಬೆಲೆಯಲ್ಲಿ ಹಲವು ಆವಿಷ್ಕಾರ ಆಗಿದೆ ಎಂದರು.
ಮೈಸೂರು ರೇಷ್ಮೆ ಸೀರೆಗಳು ಇಂದು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ- ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಜವಳಿ ಖಾತೆ ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಅವರು ಮಾತನಾಡಿ ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು ನಮ್ಮ ಮುಖಂಡರು ಇವರು 1949 ರಲ್ಲಿ ಕೇಂದ್ರ ರೇಷ್ಮೆ ಮಂಡಳಿಯನ್ನು ಪ್ರಾರಂಭಿಸಿದರು. ಮೈಸೂರಿನ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ರೇಷ್ಮೆಯನ್ನು ಪರಿಚಯಿಸಿದರು. ಮೈಸೂರು ರೇಷ್ಮೆ ಸೀರೆಗಳು ಇಂದು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ರೇಷ್ಮೆ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಮಾನ್ಯ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ರೈತರ ಅದಾಯವನ್ನು ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕರ್ನಾಟಕದಲ್ಲಿ ತೆಂಗು ಬೆಳೆಯು ತುಮಕೂರು ಹಾಗೂ ರಾಮನಗರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ ಆದರೆ ರೇಷ್ಮೆಯನ್ನು ಕರ್ನಾಟಕದ ಹೆಚ್ಚು ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಚೈನಾದ ರೇಷ್ಮೆ ಯಿಂದ ಭಾರತದ ರೇಷ್ಮೆ ಗೆ ಬೆಲೆ ಕಡಿಮೆ ಇದೆ. ಆದರೆ ಮುಂದಿನ ದಿನಗಳಲ್ಲಿ ಚೈನಾದ ರೇಷ್ಮೆ ಕಡಿಮೆ ಆಗುತ್ತದೆ ಅಲ್ಲಿ ಕೆಲಸಗಾರರ ಕೊರತೆ ಉಂಟಾಗುತ್ತಿದೆ. ಇದರಿಂದ ಭಾರತದ ರೇಷ್ಮೆ ಗೆ ಉತ್ತಮ ಬೆಲೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯಲಾಗುತ್ತದೆ. ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸಬಹುದಾಗಿದೆ. ದೇಶದ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕೇಂದ್ರ ಜವಳಿ ರಾಜ್ಯ ಸಚಿವರಾದ ಪವಿತ್ರ ಮಾರ್ಗರೇಟ್, ಕನ್ನಡ ಭಾಷೆಯ ಹೆಚ್ಚು ಶ್ರೀಮಂತವಾದ ಭಾಷೆಯಾಗಿದೆ. ರೇಷ್ಮೆ ಬೆಳೆಯು ಅಬಿವೃದ್ದಿ ಹೊಂದಲು 1949 ರಿಂದ ರೇಷ್ಮೆ ಮಂಡಳಿಯ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ರೇಷ್ಮೆಯು ಒಂದು ಉತ್ತಮ ಉದ್ದಿಮೆಯಾಗಿದೆ. ದೇಶದ ರಾಷ್ಟ್ರೀಯ ಅದಾಯದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಇದು ಗ್ರಾಮೀಣ ಜನರ ಹಾಗೂ ಮಹಿಳೆಯರ ನೆಚ್ಚಿನ ಬೆಳೆಯಾಗಿದೆ. ಇದರಿಂದ ಗ್ರಾಮಿಣ ಜನರ ಆದಾಯವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದರು.
ಜವಳಿ ಉದ್ಯಮವು ಅಗಾಧವಾಗಿ ಬೆಳೆದಿದೆ. ಕೋಟ್ಯಾಂತರ ಜನರಿಗೆ ಜವಳಿ ಉದ್ಯಮವು ಉದ್ಯೋಗವನ್ನು ನೀಡಿದೆ. ದೇಶದ ಜಿ ಡಿ ಪಿ ಗೆ ಜವಳಿ ಉದ್ಯಮವು ಉತ್ತವಾದ ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರಕಾರದಿಂದ ರೇಷ್ಮೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು- ಸಚಿವ ಕೆ ವೆಂಕಟೇಶ್
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಕೆ ವೆಂಕಟೇಶ್ ಅವರು ಮಾತನಾಡಿ ರೇಷ್ಮೆ ಕರ್ನಾಟಕ ರಾಜ್ಯದಲ್ಲಿ ಪ್ರತಿಷ್ಠಿತ ಬೆಳೆಯಾಗಿದೆ. ಕೇಂದ್ರ ಸರಕಾರದಿಂದ ರೇಷ್ಮೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇಡೀ ವಿಶ್ವದಲ್ಲಿ ಮೈಸೂರು ರೇಷ್ಮೆ ಸೀರೆಗಳು ಹೆಚ್ಚು ಪ್ರಸಿದ್ಧಿ ಆಗಿವೆ. ರೇಷ್ಮೆ ಬೆಳೆಗಾರರಿಗೆ ಅನುಕೂಲಕರವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ರೇಷ್ಮೆ ಬೆಳೆಗೆ ಪ್ರೋತ್ಸಾಹ ನೀಡಲು ಎಲ್ಲಾ ರೀತಿಯ ಕಾರ್ಯ ನಿರ್ವಹಿಸಲಾಗುವುದು-ಸಂಸದ ಯದುವೀರ್
ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಮೈಸೂರಿಗೂ ರೇಷ್ಮೆ ಗೂ ಅವಿನಾಭಾವ ಸಂಬಂಧ ಇದೆ. ವಿಜಯನಗರ ಅರಸರ ಕಾಲದಿಂದ ರೇಷ್ಮೆ ಇಲ್ಲಿ ಪ್ರಚಲಿತದಲ್ಲಿ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೇಷ್ಮೆ ಬೆಳೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ರೇಷ್ಮೆ ಬೆಳೆಗೆ ಪ್ರೋತ್ಸಾಹ ನೀಡಲು ಎಲ್ಲಾ ರೀತಿಯ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾದ ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾದ ಡಾ. ಕೆ ಸುಧಾಕರ್ ಅವರು ಮಾತನಾಡಿ, ದೇಶದ 26 ರಾಜ್ಯಗಳಲ್ಲಿ ರೇಷ್ಮೆಯನ್ನು ಬೆಳೆಯುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವುದರಿಂದ ಇಳುವರಿಯೂ ಹೆಚ್ಚಾಗಿದೆ. ಅದೇ ರೀತಿ ಬೆಲೆಯೂ ಹೆಚ್ಚಾಗಿದೆ. ಮೈಸೂರಿಗೆ ಜರ್ಮನಿಯಿಂದ ರೇಷ್ಮೆ ಬೆಳೆಯನ್ನು ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆಯನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಮಧ್ಯವರ್ತಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ದೋರುತ್ತಾ ಇಲ್ಲ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
ಕೇಂದ್ರ ಜವಳಿ ಇಲಾಖೆಯ ಕಾರ್ಯದರ್ಶಿಗಳಾದ ರಚನಾ ಷಾ ಅವರು ಮಾತನಾಡಿ ನಾವು ಇಂದು ಕೇಂದ್ರ ರೇಷ್ಮೆ ಮಂಡಳಿಯ 75 ವರ್ಷ ಆಚರಣೆ ಮಾಡುತ್ತಾ ಇದ್ದೇವೆ.1949 ರಲ್ಲಿ ಕೇಂದ್ರ ರೇಷ್ಮೆ ಮಂಡಳಿ ಪ್ರಾರಂಭವಾಯಿತು. ಜವಳಿ ವಲಯವು ಪ್ರಮುಖವಾದ ವಾಲಯವಾಗಿದೆ. 4.5 ಕೋಟಿ ಜನರು ಜವಳಿ ವಲಯದಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ರೇಷ್ಮೆ ಬೆಳೆಯು ರೈತರಿಗೆ ಉತ್ತಮ ಆದಾಯ ತರುವ ಬೆಳೆಯಾಗಿದೆ. ಗ್ರಾಮಿಣ ಭಾಗದ ಮಹಿಳೆಯರು ರೇಷ್ಮೆ ಕೃಷಿ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೇಷ್ಮೆ ಉತ್ಪಾದನೆಯು ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ರೇಷ್ಮೆ ಬಟ್ಟೆಗಳು ಇಂದು ವಿಶ್ವ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಹೊಂದಿವೆ. ಪ್ರಪಂಚದಲ್ಲಿ ಅತಿ ಹೆಚ್ಚು ರೇಷ್ಮೆ ಉತ್ಪಾದನೆ ಮಾಡುವ ರಾಷ್ಟ್ರ ಭಾರತ ಎಂದು ತಿಳಿಸಿದರು.
ರಾಜ್ಯ ಸಭಾ ಸದಸ್ಯರಾದ ನಾರಾಯಣ್ ಕೊರಗಪ್ಪ ಅವರು ಮಾತನಾಡಿ ಡಾ. ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು ಕೇಂದ್ರ ರೇಷ್ಮೆ ಮಂಡಳಿಯ ನ್ನು 1949 ರಲ್ಲಿ ಸ್ಥಾಪನೆ ಮಾಡಿದರು. ರೈತರು ಬೆಳೆದ ರೇಷ್ಮೆಯನ್ನು ನೇಕಕಾರರು ನೇಯ್ಗೆ ಮಾಡಬೇಕಾಗಿತ್ತು. ಆದರೆ ಇಂದು ಶೇಕಡಾ 70 ರಷ್ಟು ಜನರು ತಮ್ಮ ಕೈ ಮಗ್ಗಗಳನ್ನು ಸ್ಥಗಿತ ಮಾಡಿದ್ದ್ದಾರೆ ಕಾರಣ ನೇಕಾರರ ನೇಯ್ದ ಬಟ್ಟೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ನೇಕಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ರೇಷ್ಮೆ ಕೃಷಿ ಉಳಿಯಲು ಸರ್ಕಾರದಿಂದ ಪ್ರೋತ್ಸಾಹ ದೊರೆಯಬೇಕು- ಶಾಸಕ ಜಿ.ಟಿ ದೇವೇಗೌಡ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿ ನಾನು ಸಹ 1975 ರಲ್ಲಿ ರೇಷ್ಮೆ ಬೆಳೆಯನ್ನು ಬೆಳೆದಿದ್ದೇನೆ. ನನಗೆ ಪ್ರಗತಿ ಪರ ರೈತ ಎಂಬ ಬಿರುದು ಪಡೆದಿದ್ದೇನೆ. ಕಡಿಮೆ ನೀರು ಇರುವ ಕಡೆಯು ಸಹ ರೇಷ್ಮೆ ಬೆಳೆಯನ್ನು ಬೆಳೆಯಬಹುದಾಗಿದೆ. ರೇಷ್ಮೆ ಕೃಷಿ ಉಳಿಯಲು ಸರ್ಕಾರದಿಂದ ಪ್ರೋತ್ಸಾಹ ದೊರೆಯಬೇಕು. ಪ್ರತಿ ಜಿಲ್ಲೆಯಲ್ಲಿಯೂ ಮಾರುಕಟ್ಟೆ ತೆರೆಯಬೇಕು. ಮಧ್ಯವರ್ತಿಗಳ ಹಾವಳಿಯನ್ನು ತಡೆಯಬೇಕು ಎಂದು ಮನವಿ ಮಾಡಿದರು.
ಕೇಂದ್ರ ರೇಷ್ಮೆ ಮಂಡಳಿಯ ವತಿಯಿಂದ 75 ರೂ ಗಳ ನಾಣ್ಯವನ್ನು ಬಿಡುಗಡೆಗೊಳಿಸಲಾಯಿತು. ನಂತರ ಕೇಂದ್ರ ರೇಷ್ಮೆ ಮಂಡಳಿಯ ಕಾಫಿ ಟೇಬಲ್ ಬುಕ್ ಅನ್ನು ಬಿಡುಗಡೆ ಮಾಡಲಾಯಿತು. ಕೇಂದ್ರ ರೇಷ್ಮೆ ಮಂಡಳಿಯ ಹೆಸರಿನ ಪೋಸ್ಟಲ್ ಕವರ್ ಅನ್ನು ಬಿಡುಗಡೆ ಮಾಡಲಾಯಿತು. ಕೇಂದ್ರ ರೇಷ್ಮೆ ಮಂಡಳಿಯ ವತಿಯಿಂದ ಉತ್ತಮ ಹೈಬ್ರಿಡ್ ತಳಿಯ ರೇಷ್ಮೆ ತಳಿಗಳನ್ನು ಬಿಡುಗಡೆ ಮಾಡಲಾಯಿತು. ರೇಷ್ಮೆ ಕೃಷಿ ಹಾಗೂ ರೇಷ್ಮೆ ನೇಯ್ಗೆಯಲ್ಲಿ ಸಾಧನೆ ಮಾಡಿರುವ ವಿವಿಧ ರಾಜ್ಯಗಳ ರೈತರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಆಯುಕ್ತ ರಾಜೇಶ್ ಗೌಡ, ಕೇಂದ್ರ ಜವಳಿ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಪ್ರಜಕ್ತ ಎಲ್ ವರ್ಮ ಅವರು ಸೇರಿದಂತೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.
Key words: Silk crop, 27 states, country, Union Minister, HDK