ಬೆಂಗಳೂರು,ಜುಲೈ,12,2023(www.justkannada.in): ಬೀದರ್ ಜಿಲ್ಲೆಯಲ್ಲಿ ಸಿಪೆಟ್ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ) ಕೇಂದ್ರದ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವ ಸಂಬಂಧ ಕೇಂದ್ರ ಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಭಾರಿ & ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬುಧವಾರ ಸಮಾಲೋಚನೆ ನಡೆಸಿದರು.
ಕೇಂದ್ರ ಸಚಿವ ಖೂಬಾ ಅವರು ಸಚಿವ ಎಂ.ಬಿ ಪಾಟೀಲ್ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ, ಸಿಪೆಟ್ ಕೇಂದ್ರದ ಸ್ಥಾಪನೆಗಾಗಿ ಜಿಲ್ಲಾಡಳಿತವು ಬೀದರ್ ಜಿಲ್ಲೆ ಔರಾದ ತಾಲ್ಲೂಕಿನ ಬಲ್ಲೂರ ಹತ್ತಿರ 10 ಎಕರೆ ಜಾಗವನ್ನು ಈಗಾಗಲೇ ಗುರುತಿಸಿದೆ. ಅಲ್ಲದೇ, ಕಳೆದ ವರ್ಷ ಇದರ ಭೂಮಿಪೂಜೆಯೂ ನಡೆದಿದೆ ಎಂದರು.
ಮಂಜೂರಾಗಿರುವ ಸಿಪೆಟ್ ಕಟ್ಟಡಕ್ಕಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇಕಡಾ 50ರಷ್ಟು ಅನುದಾನವನ್ನು ಕೊಟ್ಟಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಶೇಕಡಾ 50ರಷ್ಟು ಹಣ ನೀಡಿ ಕಟ್ಟಡ ಕಾಮಗಾರಿಗೆ ಚಾಲನೆ ಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಖೂಬಾ ಅವರು ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ಕೋರಿದರು. ಜಿಲ್ಲೆಯಲ್ಲಿ ಉದ್ದಿಮೆಗಳ ಸ್ಥಾಪನೆಗೆ ಹೂಡಿಕೆ ಮಾಡಲು ಕೆಲವರು ಈ ಹಿಂದೆ ಆಸಕ್ತಿ ತೋರಿದ್ದರು. ಆದರೆ ಕೋವಿಡ್ ನಿಂದಾಗಿ ಅದಕ್ಕೆ ಹಿನ್ನಡೆಯಾಗಿತ್ತು. ಈಗ ಪುನಃ ಆಸಕ್ತರನ್ನು ಜಿಲ್ಲೆಯಲ್ಲಿ ಉದ್ಯಮಿಗಳ ಸ್ಥಾಪನೆಗೆ ಆಹ್ವಾನಿಸಬೇಕು ಎಂದು ಅಭಿಪ್ರಾಯಪಟ್ಟರು.
ಬೀದರ್ ಭಾಗದ ಜನ ಉದ್ಯೋಗ ಹುಡುಕಿಕೊಂಡು ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಉದ್ದಿಮೆಗಳು ಸ್ಥಾಪನೆಯಾದರೆ ಈ ವಲಸೆಗೆ ತಡೆ ಬೀಳುತ್ತದೆ ಎಂದು ವಿವರಿಸಿದರು.
ಶಾಸಕರಾದ ಶೈಲೇಂದ್ರ ಬೆಲ್ದಾಳೆ ಮತ್ತು ಸಿದ್ದು ಪಾಟೀಲ್ ಅವರು ಈ ಸಂದರ್ಭದಲ್ಲಿ ಇದ್ದರು.
Key words: Sipet -building work –Aurad- Union Minister-Bhagavantha Khuba – Minister -MB Patil..