ಬೆಂಗಳೂರು:ಜುಲೈ-20: ಸಾವಿರಾರು ಜನರಿಗೆ ವಂಚಿಸಿ ದುಬೈಗೆ ಪರಾರಿಯಾಗಿದ್ದ ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಕೊನೆಗೂ ಜಾರಿ ನಿರ್ದೇಶನಾಲಯ(ಇ.ಡಿ) ಬಲೆಗೆ ಬಿದ್ದಿದ್ದಾನೆ. ಗುರುವಾರ ತಡರಾತ್ರಿ 1.50ಕ್ಕೆ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಇ.ಡಿ ಹಾಗೂ ಎಸ್ಐಟಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಇದರೊಂದಿಗೆ ಮನ್ಸೂರ್ನಿಂದ ಹಣ, ಲಂಚ ಪಡೆದ ರಾಜಕಾರಣಿಗಳು, ಅಧಿಕಾರಿಗಳ ಮುಖವಾಡ ಬಯಲಾಗುವುದೇ ಎಂಬ ಕುತೂಹಲ ಮೂಡಿದೆ.
ಜು.15ರಂದು ಎರಡನೇ ವಿಡಿಯೋ ಬಿಡುಗಡೆ ಮಾಡಿದ್ದ ಮನ್ಸೂರ್, ‘ಕೆಲ ರಾಜಕಾರಣಿಗಳು ಹಾಗೂ ಸಮಾಜಘಾತುಕರಿಂದ ಜೀವಭಯವಿದೆ. ಪೊಲೀಸರು ಭದ್ರತೆ ಒದಗಿಸುವುದಾದರೆ 24 ಗಂಟೆಗಳಲ್ಲಿ ಭಾರತಕ್ಕೆ ವಾಪಸ್ ಆಗುತ್ತೇನೆ’ ಎಂದು ಹೇಳಿದ್ದ. ಅದರಂತೆಯೇ, ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಇ.ಡಿ. ಮತ್ತು ಎಸ್ಐಟಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆಗಾಗಿ ಇ.ಡಿ. ಅಧಿಕಾರಿಗಳು ದೆಹಲಿಯ ಎಂಟಿಎನ್ಎಲ್ನಲ್ಲಿರುವ ಕೇಂದ್ರ ಕಚೇರಿಗೆ ಕರೆದೊಯ್ದಿದ್ದಾರೆ.
ಎಸ್ಐಟಿ ವಶಕ್ಕೆ?
ಪ್ರಕರಣಕ್ಕೆ ಸಂಬಂಧ ಇ.ಡಿ. ಅಧಿಕಾರಿಗಳು ಮನ್ಸೂರ್ನಿಂದ ಮಹತ್ವದ ಮಾಹಿತಿ ಪಡೆದುಕೊಂಡ ಬಳಿಕವಷ್ಟೇ ಎಸ್ಐಟಿ ವಶಕ್ಕೆ ನೀಡಲಿದ್ದಾರೆ. ಶನಿವಾರ ಮನ್ಸೂರ್ನನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ.
ವಿಡಿಯೋ ವಿಚಾರಣೆ
ಮನ್ಸೂರ್ ಜೂ.24ರಂದು ಬಿಡುಗಡೆ ಮಾಡಿದ್ದ ಮೊದಲ ವಿಡಿಯೋದಲ್ಲಿ ಶಾಸಕ ರೋಷನ್ ಬೇಗ್, ಸಚಿವ ಜಮೀರ್ ಅಹಮದ್ ಖಾನ್ ಮತ್ತು ರಾಜ್ಯಸಭಾ ಸದಸ್ಯ ಕೆ.ರೆಹಮಾನ್ ಖಾನ್ ಹೆಸರುಗಳನ್ನು ಉಲ್ಲೇಖಿಸಿ ಆರೋಪಿಸಿದ್ದ. ಈ ಸಂಬಂಧ ಇಡಿ ಅಧಿಕಾರಿಗಳು ಸಚಿವ ಜಮೀರ್ ಅಹಮದ್ ಖಾನ್ ವಿಚಾರಣೆ ನಡೆಸಿದ್ದರು. ಅಲ್ಲದೆ ಎಸ್ಐಟಿ ಅಧಿಕಾರಿಗಳು ಶಾಸಕ ರೋಷನ್ ಬೇಗ್ಗೆ ನೋಟಿಸ್ ನೀಡಿದ್ದರು. ಪುಣೆಗೆ ಹೊರಟಿದ್ದ ಅವರನ್ನು ರಾತ್ರೊರಾತ್ರಿ ವಶಕ್ಕೆ ಪಡೆದು, ಮನ್ಸೂರ್ ಖಾನ್ ಜೊತೆಗಿನ ವ್ಯವಹಾರದ ಕುರಿತು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ಐಎಂಎ ಕುರಿತು ಸರ್ಕಾರಕ್ಕೆ ಕ್ಲೀನ್ಚಿಟ್ ವರದಿ ಸಲ್ಲಿಸಿದ್ದ ಆರೋಪದ ಮೇರೆಗೆ ಬೆಂಗಳೂರು ಉತ್ತರ ವಿಭಾಗಾಧಿಕಾರಿಯಾಗಿದ್ದ ಎಲ್.ಸಿ.ನಾಗರಾಜ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್ ಸೇರಿ ಹಲವು ಮಂದಿಯನ್ನು ಎಸ್ಐಟಿ ಬಂಧಿಸಿದೆ.
ಕೃಪೆ:ವಿಜಯವಾಣಿ