ಮಂಗಳೂರು, ಜೂನ್,18,2021(www.justkannada.in): ರಾಜ್ಯದಲ್ಲಿ 100 ಕ್ಕೂ ಅಧಿಕ ಮಂದಿ ಪತ್ರಕರ್ತರು ಕೊರೋನಾ ಸಂಕಷ್ಟದ ಎರಡು ಅಲೆಗಳ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರನ್ನು ಭೇಟಿ ಮಾಡಿ. ಅಗಲಿದ ಪತ್ರಕರ್ತರಿಗೆ ಸಂತಾಪ ಸೂಚಿಸಿ ಶಿವಾನಂದ ತಗಡೂರು ಮಾತನಾಡಿದರು.
ಕೊರೋನಾ ಸಂದರ್ಭದಲ್ಲಿ ವ್ರತ್ತಿನಿರತ ಪತ್ರಕರ್ತರು ಸವಾಲುಗಳ ಮಧ್ಯೆ ಕಾರ್ಯ ನಿರ್ವಹಿಸಿದ್ದಾರೆ. ಈ ನಡುವೆ ಹಲವು ಪತ್ರಕರ್ತರನ್ನು ನಾವು ಕಳೆದು ಕೊಂಡಿದ್ದೇವೆ. ಕಳೆದ ಬಾರಿ 31 ಮತ್ತು ಎರಡನೇ ಅಲೆಯಲ್ಲಿ ಸುಮಾರು 70ಕ್ಕೂ ಅಧಿಕ ಪತ್ರಕರ್ತರು ಬಲಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತರ 31 ಪತ್ರಕರ್ತರ ಕುಟುಂಬಕ್ಕೆ ಮುಖ್ಯಮಂತ್ರಿಯವರ ಮೂಲಕ ತಲಾ 5 ಲಕ್ಷ ಪರಿಹಾರ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ವಿತರಿಸಲಾಗಿದೆ.
ರಾಜ್ಯ ಸರಕಾರ ಪತ್ರಕರ್ತರ ನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದ ಬಳಿಕ ಪತ್ರಕರ್ತರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಅದಕ್ಕಾಗಿ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಶಿವಾನಂದ ತಗಡೂರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಅಧಿಕೃತ ರಚನೆಗೆ ಚಾಲನೆ ನೀಡಿದರು. ಪತ್ರಕರ್ತರ ಗುರುತಿನ ಚೀಟಿಯನ್ನು ಸಾಂಕೇತಿಕ ವಾಗಿ ನೀಡಿದರು. ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ನಡೆಸುತ್ತಿರುವ ಊಟ ಉಪಹಾರ ವಿತರಣೆ,ಕಿಟ್ ವಿತರಣೆ ಲಸಿಕೆ ನೀಡುವ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ ಎಂದು ಶಿವಾನಂದ ತಗಡೂರು ಶ್ಲಾಘಿಸಿದರು.
ಸಮಾರಂಭದಲ್ಲಿ ಏಷ್ಯನ್ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಮದನ್ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಮುಲ್ಕಿ ವಲಯದ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಉಪಸ್ಥಿತರಿದ್ದರು.ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಸ್ವಾಗತಿಸಿ ಹರೀಶ್ ಮೋಟುಕಾನ ವಂದಿಸಿದರು.
Key words: Shivananda Tagadur- More than- 100 journalists-corona-death