ಶಿರಸಿ,ಜುಲೈ,23,2021(www.justkannada.in): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶೀರ್ಲೆ ಜಲಪಾತಕ್ಕೆ ಗುರುವಾರ ಮಧ್ಯಾಹ್ನ ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ ಆರು ಜನ ಯುವಕರು ಶುಕ್ರವಾರ 9 ಗಂಟೆಯ ಸುಮಾರು ಪತ್ತೆಯಾಗಿದ್ದಾರೆ.
ಶಿರ್ಲೇ ಜಲಪಾತದ ಪಕ್ಕದ ಗ್ರಾಮ ಸುಣಜೋಗದ ರಾಘವೇಂದ್ರ ಭಟ್ಟ ಎಂಬುವವರ ತೋಟದಲ್ಲಿ ಗುರುವಾರ ರಾತ್ರಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಬೆಳಿಗ್ಗೆ ಮನೆಯಿಂದ ತೋಟದ ಕಡೆಗೆ ತೆರಳಿದಾಗ ಚಳಿಯಲ್ಲಿ ನಡುಗುತ್ತಾ ನಿಂತಿದ್ದ ಆರು ಜನರನ್ನು ಕಂಡ ರಾಘವೇಂದ್ರ ಭಟ್ ಅವರು, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಒಪ್ಪಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರು ಜನ ಯುವಕರು ಮೂರು ಸ್ಕೂಟರ್ ಮೇಲೆ ಶಿರ್ಲೇ ಪ್ರವಾಸಕ್ಕೆ ಬಂದಿದ್ದರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಲಪಾತ ಮತ್ತು ಹಳ್ಳಕೊಳ್ಳಗಳಲ್ಲಿ ಭಾರಿ ಮಳೆಯಿಂದಾಗಿ ನೀರು ತುಂಬಿ ಹರಿಯುತ್ತಿದ್ದು ಪ್ರವಾಸಿಗರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಲವಾರು ಜನ ಶಿರ್ಲೆ ಪ್ರವಾಸಿಗರನ್ನು ತಡೆದಿದ್ದರು.
ಕೆಲವು ಜನ ಪ್ರವಾಸಿಗರು ಮರಳಿ ತಮ್ಮ ಊರುಗಳಿಗೆ ತೆರಳಿದ್ದರು ಇನ್ನು ಕೆಲವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕ್ಯಾತೆ ತೆಗೆದು ಶಿರ್ಲೇ ಜಲಪಾತಕ್ಕೆ ತೆರಳಿದ್ದರು. ಅವರಲ್ಲಿ ಕೆಲವು ಗುಂಪಿನವರು ಸಮಯ ಇರುವಾಗಲೇ ಮರಳಿ ಬಂದಿದ್ದು, ಆರು ಜನರ ಒಂದು ತಂಡ ಮಾತ್ರ ಶಿರ್ಲೆ ಫಾಲ್ಸ್ ಬಳಿ ಸಿಲುಕಿಕೊಂಡಿತ್ತು.
ನಾಪತ್ತೆಯಾದ ಹುಬ್ಬಳ್ಳಿಯ ಈ ಆರು ಜನ ಶಿರ್ಲೇ ಜಲಪಾತಕ್ಕೆ ತೆರಳುವಾಗ ಇದ್ದ ಕಾಲುಸಂಕ ಮರಳಿ ಬರುವಾಗ ನೀರಿಗೆ ಕೊಚ್ಚಿ ಹೋಗಿತ್ತು. ಹೀಗಾಗಿ ಹಳ್ಳವನ್ನು ದಾಟಿ ಸ್ಕೂಟರ್ ಇಟ್ಟಿರುವ ಎರಡು ಕಿಲೋಮೀಟರ್ ದೂರದ ಸ್ಥಳಕ್ಕೆ ಬರುವುದು ಇವರಿಗೆ ಕಷ್ಟಕರವಾಗಿದ್ದು ಸಿಕ್ಕಿರುವ ದಾರಿಯನ್ನು ಹುಡುಕಿಕೊಂಡು ಇರುವ ಏಕೈಕ ಕಾಲುಸಂಕವನ್ನು ದಾಟಿ ರಾಘವೇಂದ್ರ ಭಟ್ ಅವರ ತೋಟಕ್ಕೆ ತೆರಳಿ ತೋಟದಲ್ಲಿ ಚಳಿಯಲ್ಲಿ ನಡುಗುತ್ತ ಕುಳಿತಿದ್ದರು.
Key words: Six young -men – found -missing – trip- Shirley Falls