ಮೈಸೂರು, ಜುಲೈ 24, 2021 (www.justkannada.in): ಕಪಿಲಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸ್ನಾನಘಟ್ಟದ ಬಳಿಯ ಐತಿಹಾಸಿಕ ಹದಿನಾರು ಕಲ್ಲು ಮಂಟಪ ಹಾಗೂ ಸೋಪಾನ ಕಟ್ಟೆಗಳು ಮುಳುಗಿವೆ.
ನದಿಯಲ್ಲಿ ಪ್ರವಾಹ ಹೆಚ್ಚಾದರೆ, ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಮುಂದಾಗಿದೆ.
ಕಪಿಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವತಿಯಿಂದ ನಡೆಸಲಾಗುತ್ತಿದ್ದ ಮುಡಿ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ತಾಲ್ಲೂಕಿನ ಬೊಕ್ಕಹಳ್ಳಿ, ಕುಳ್ಳಂಕನ ಹುಂಡಿ ನಗರದ ಹಳ್ಳದಕೇರಿ, ಕುರಬಗೇರಿ, ಗೌರಿ ಘಟ್ಟ, ತೋಪಿನ ಬೀದಿಯ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಸಂಭವವಿದೆ.