ಮೈಸೂರು, ಸೆಪ್ಟೆಂಬರ್ 08, 2023 (www.justkannada.in): ಕೊಡಗಿನ ಭವಾನಿ ತೆಕ್ಕಡ ನಂಜುಂಡ ಅವರು ಸ್ಕೀಯಿಂಗ್ ಜತೆಗೆ ಬಯಾಥ್ಲಾನ್’ ಸ್ಪರ್ಧೆಯಲ್ಲಿ ಅಪಾರ ಸಾಧನೆ ಮಾಡುತ್ತಿದ್ದು, 2026ರ ಒಲಿಂಪಿಕ್ಸ್’ನಲ್ಲಿ ಪದಕಕ್ಕೆಕೊರಳೊಡ್ಡುವ ನಿಟ್ಟಿನಲ್ಲಿ ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಬಹುಪಾಲು ಮಂದಿಗೆ ಗೊತ್ತಿಲ್ಲದ ಸ್ಕೀಯಿಂಗ್ ಸ್ಪರ್ಧೆಯಲ್ಲಿ ನಮ್ಮ ರಾಜ್ಯದ ಅದರಲ್ಲೂ ಕೊಡಗಿನ ಯುವತಿ ಭವಾನಿ ಈಗಾಗಲೇ ಅಪಾರ ಸಾಧನೆ ಮಾಡಿದ್ದಾರೆ. ಇದರ ಜತೆಗೆ ಬಯಥ್ಲಾನ್ ಸ್ಪರ್ಧೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. 2026ರಲ್ಲಿ ನಡೆಯಲಿರುವ ಒಲಂಪಿಕ್ಸ್ನಲ್ಲಿ ನಾರ್ಡಿಕ್ (ಕ್ರಾಸ್ ಕಂಟ್ರಿ) ಸ್ಕೀಯಿಂಗ್ ನಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ಹಂಬಲದಿಂದ ತಯಾರಿ ನಡೆಸುತ್ತಿದ್ದಾರೆ.
ಮುಂದಿನ ಒಲಂಪಿಕ್ಸ್ನತ್ತ ದೃಷ್ಟಿ ನೆಟ್ಟಿರುವ ಭವಾನಿ ಅವರು ಅದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಕಠಿಣ ರೀತಿಯ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಬಯಾಥ್ಲಾನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಮುಂದಿನ ದಿನಗಳಲ್ಲಿ ತಮ್ಮ ಪ್ರತಿಭೆಯಿಂದ ಮತ್ತಷ್ಟು ಹೊಳೆಯುವ ಕ್ರೀಡಾ ತಾರೆಯಾಗಲಿದ್ದಾರೆ. ಅಂದಹಾಗೆ ಕಜಕಿಸ್ತಾನದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 5ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಬಯಾಥ್ಲಾನ್ ಸ್ಪರ್ಧೆ ನಡೆಯಿತು. ಇಲ್ಲಿ ಮೊದಲ ಬಾರಿಗೆ ಕರ್ನಾಟಕದ ಯುವತಿ ಭಾರತವನ್ನು ಪ್ರತಿನಿಧಿಸಿದ್ದರು.
ಪರ್ವತಾರೋಹಣದ ಮೂಲಕ ಆರಂಭವಾದ ಭವಾನಿ ಅವರ ಸಾಧನೆಯ ಹಾದಿ ರಾಜ್ಯ, ರಾಷ್ಟ್ರ ಈಗ ಅಂತಾರಾಷ್ಟೀಯ ಮಟ್ಟಕ್ಕೆ ಏರಿದೆ. ಅಂತಾರಾಷ್ಟ್ರೀಯ ಮಟ್ಟದ ಏಷ್ಯನ್ ಸಮ್ಮರ್ ಬಯಾಥ್ಲಾನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಒಲಂಪಿಕ್ಸ್ ನಲ್ಲಿ ದೇಶದ ಬಾವುಟ ಹಾರಿಸಲು ಬೇಕಾದ ಸಿದ್ಧತೆ ನಡೆಸಿದ್ದಾರೆ. 2026ರಲ್ಲಿ ನಡೆಯಲಿರುವ ಒಲಂಪಿಕ್ಸ್ನಲ್ಲಿ ನಾರ್ಡಿಕ್ (ಕ್ರಾಸ್ ಕಂಟ್ರಿ) ಸ್ಕೀಯಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲಲು ಶ್ರಮ ವಹಿಸುತ್ತಿದ್ದಾರೆ.
ಸಾಕಷ್ಟು ವೆಚ್ಚ, ವಿದೇಶದಲ್ಲಿ ತರಬೇತಿ
ಸ್ಕೀಯಿಂಗ್ ಹಾಗೂ ಬಯಥ್ಲಾನ್ ಸ್ಪರ್ಧೆ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಲ್ಲ. ಜತೆಗೆ ಇದಕ್ಕೆ ಸೂಕ್ತ ತರಬೇತಿ ಮತ್ತಿತರ ಸೌಲಭ್ಯಗಳು ಇಲ್ಲಿ ಲಭ್ಯವಿಲ್ಲ. ಹೀಗಾಗಿ ವಿದೇಶಗಳಿಗೆ ತೆರಳಿ ತರಬೇತಿ ಪಡೆಯಬೇಕಾಗುತ್ತದೆ. ಜತೆಗೆ ಇದರ ಪರಿಕರಗಳಿಗೂ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಸದ್ಯಕ್ಕೆ ಭವಾನಿ ಪೋಷಕರು ಇದನ್ನು ಭರಿಸುತ್ತಿದ್ದಾರೆ. ಮತ್ತಷ್ಟು ಪ್ರಾಯೋಜಕರು ಸಿಕ್ಕರೆ ಈ ಕ್ರೀಡಾ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಲು ನೆರವಾಗಲಿದೆ.
ಹೀಗಿತ್ತು ಭವಾನಿ ಅವರ ಆರಂಭಿಕ ಹೆಜ್ಜೆ…
ಮೂಲತಃ ಭವಾನಿ ಕೊಡಗಿನ ನಾಪೋಕ್ಲು ಸಮೀಪದ ಪೆರೂರಿನವರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್ಸಿಸಿಗೆ ಸೇರಿದ್ದರು. ಇದು ಮುಂದೆ ಸ್ಕೀಯಿಂಗ್ ಹಾಗೂ ಬಯಥ್ಲಾನ್ ನಲ್ಲಿ ಸಾಧನೆ ಮಾಡಲು ಮೊದಲ ಹೆಜ್ಜೆಯಾಗಿತ್ತು. ಆರಂಭದಲ್ಲಿ ಪರ್ವಾತಾರೋಹಣದಲ್ಲಿ ಆಸಕ್ತಿ ಹೊಂದಿದ್ದ ಭವಾನಿ ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಪೋರ್ಟ್ಸ್, ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್’ನಲ್ಲಿ ಆರಂಭಿಕ ತರಬೇತಿ ಪಡೆದಿದ್ದರು. ಹಿಮಾಲಯ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿದ್ದಾರೆ.
ಸ್ಕೀಯಿಂಗ್’ನಲ್ಲಿ ಕೊಡಗಿನ ಕುವರಿಯ ಸಾಧನೆ…
ಈ ವರ್ಷ ನಡೆದ 3ನೇ ಖೇಲೋ ಇಂಡಿಯಾ ನ್ಯಾಷನಲ್ ವಿಂಟರ್ ಗೇಮ್ಸ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಭವಾನಿ ಕೊರಳೊಡ್ಡಿದ್ದಾರೆ. 2022ರಲ್ಲಿ ಇಟಲಿಯಲ್ಲಿ ನಡೆದ ರೈಫಿಸೆನ್ ಲ್ಯಾಂಗ್ಲ್ಯಾಂಡ್ ಕಪ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಜಯಿಸಿದ್ದಾರೆ. 2022ರಲ್ಲಿ ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್ ಶಿಪ್ ನಲ್ಲಿ ಒಂದು ಚಿನ್ನ, 2 ಬೆಳ್ಳಿ ಪದಕ ಗೆದ್ದಿದ್ದಾರೆ. 2022ರಲ್ಲಿ ನಡೆದ ನ್ಯಾಷನಲ್ ವಿಂಟರ್ ಬಯಥ್ಲಾನ್ ನಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 2022ರಲ್ಲಿ ಆಲ್ ಇಂಡಿಯಾ ಒಪೆನ್ ಸ್ಕೀ ಆನ್ ಸ್ನೋಬೋರ್ಡ್ ಚಾಂಪಿಂಯನ್ ಶಿಪ್ ನಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದಾರೆ. 2021ರಲ್ಲಿ ನಡೆದ 2ನೇ ಖೇಲೋ ಇಂಡಿಯಾ ನ್ಯಾಷನಲ್ ನ್ಯಾಷನಲ್ ವಿಂಟರ್ ಗೇಮ್ಸ್ ನಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ. 2020ರಲ್ಲಿ ನಡೆದ ಮೊದಲ ಖೇಲೋ ಇಂಡಿಯಾ ನ್ಯಾಷನಲ್ ವಿಂಟರ್ ಗೇಮ್ಸ್ ನಲ್ಲಿ 2 ಕಂಚಿನ ಪದಕ ಜಯಿಸಿದ್ದಾರೆ.