ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಸಾಕಷ್ಟು ವಿಸ್ತಾರವಾಗಿ ಮಾತನಾಡಿದರು.
ಈ ವೇಳೆ ಅವರು ಹೇಳಿದ ಕಥೆಯೊಂದು ಗಮನ ಸೆಳೆಯಿತು. ಇದೇ ಆ ಕಥೆ…
”ದೊಡ್ಡವರು ಯಾರೂ ಇಲ್ಲವೇ? ಅಂತ ಪ್ರಯಾಣಿಕ ಒಂದು ಮನೆಗೆ ಬಂದು ಸೂಜಿ ಕೇಳಿದ. ಹುಡುಗ ದೊಡ್ಡವರು ಯಾರೂ ಇಲ್ಲ ಅಂದ. ಪ್ರಯಾಣಿಕ ಸೂಜಿ ಹುಡುಕಿನೋಡು ಅಂದ. ಕ್ಯಾಲೆಂಡರ್, ಪಟದಲ್ಲಿ ಇಲ್ಲ ಅಂದ ಹುಡುಗ. ಕೊನೆಗೆ ಪ್ರಯಾಣಿಕ ಮನೆಯಲ್ಲವನ್ನೂ ಹುಡುಕಿ ನೋಡು ಅಂತ ವಿನಂತಿಸಿದ. ಆ ಹುಡುಗ ಇಲ್ಲ ಅಂದ್ರೆ ಇಲ್ಲ ಹೋಗ್ರಿ ಅಂತ ದಬಾಯಿಸಿದ. ನಮ್ಮ ಕಥೆ ಹೀಗಾಗಿದೆ” ಎಂದು ಗಂಭೀರ ವಿಷಯದಲ್ಲಿ ಚಟಾಕಿ ಹಾರಿಸಿದರು.
ಯಾತ್ರೆ, ಜಾತ್ರೆಯ ವ್ಯತ್ಯಾಸ…
”ಯಾತ್ರೆಗೂ ಜಾತ್ರೆಗೂ ಏನು ವ್ಯತ್ಯಾಸ. ಉತ್ತರ ಭಾರತದಲ್ಲಿ ಎಷ್ಟೋ ಭಾಷೆಗಳಲ್ಲಿ ಯಕಾರವು ಜಕಾರವಾಗುತ್ತೆ. ಯಾದವ ಅನ್ನೋದು ಜಾದವ ಅಂತ ಆಗುತ್ತೆ. ಯೋಗಿ ಆದಿತ್ಯ ಅನ್ನೋದು ಜೋಗಿ ಆದಿತ್ಯ ಅಂತ ಆಗುತ್ತೆ. ಸಂಸ್ಕೃತದ ಮೂಲ ರೀತಿಗೆ ಯೋಗಿ ಸರಿ. ಆದರೆ ಬಾಯ್ಮಾತಿನಲ್ಲಿ ಅದು ಜೋಗಿ ಆಗಿದೆ. ಅದೇ ರೀತಿ ಯಾತ್ರೆ ಅನ್ನೋದು ಜಾತ್ರೆ ಆದಾಗ ಒಂದು ವ್ಯತ್ಯಾಸವಾಗುತ್ತೆ” ಎಂದು ಹೇಳಿದರು.
”ಯಾತ್ರೆಯಲ್ಲಿ ವ್ಯಾಪಾರ, ಜನಸಂದಣಿ ಹೆಚ್ಚು ಇರಲ್ಲ. ಸಾಧಾರಣವಾಗಿ ಯಾತ್ರೆ ಹೋಗೋದಾದ್ರೆ ಯಾವುದೋ ಗುಡ್ಡ, ಶಿಖರದ ಮೇಲೆ ಒಂದು ದೇವಸ್ಥಾನ ಇರುತ್ತೆ. ಅಲ್ಲಿಗೆ ಹತ್ತಿ ಹೋದರೆ, ಜಗಲಿ ಮೇಲೆ ಎರಡು ಗಂಟೆ ಕೂತರೆ ಮನಸ್ಸು ಶಾಂತವಾಗುತ್ತೆ. ಅಷ್ಟು ಮಾಡಿ ವಾಪಸ್ ಬರ್ತೀವಿ.
ದೇವಸ್ಥಾನ ಪ್ರಸಿದ್ಧಿಗೆ ಬಂದಾಗ ಹೆಚ್ಚು ಹೆಚ್ಚು ಜನರು ಬರಲು ಶುರು ಮಾಡ್ತಾರೆ. ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡುತ್ತೆ. ಆಗ ಅದು ಜಾತ್ರೆ ಆಗುತ್ತೆ” ಎಂದು ಹೇಳಿದರು.