- ಮಂಗಳೂರು/ಚಿಕ್ಕಮಗಳೂರು:ಜುಲೈ-30: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರು ನಾಪತ್ತೆಯಾಗಿದ್ದು, ಉಳ್ಳಾಲ ಸೇತುವೆ ಸಮೀಪ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೋಮವಾರ ಸಂಜೆ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ರಾತ್ರಿ 7.30ರ ವೇಳೆ ಕಾರಿನಲ್ಲಿ ಚಾಲಕನ ಜತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆಯ ಬದಿ ನಿಲ್ಲಿಸಲು ಹೇಳಿ, ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಆ ಬಳಿಕ ಚಾಲಕ ಸುಮಾರು ಎರಡು ಗಂಟೆ ಕಾದರೂ ಸಿದ್ಧಾರ್ಥ ಬರಲಿಲ್ಲ. ಇದಕ್ಕೆ ಆತಂಕಿತರಾದ ಚಾಲಕ ಪೊಲೀಸ್ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ಸಿದ್ಧಾರ್ಥ ಅವರು ಸೇತುವೆಯ ಮಧ್ಯಭಾಗದಿಂದ ನದಿಗೆ ಹಾರಿರಬಹುದೆಂದು ಶಂಕೆ ಹಿನ್ನೆಲೆಯಲ್ಲಿ ದೇಹಕ್ಕಾಗಿ ಬೋಟ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ನದಿ ತುಂಬಿ ಹರಿಯುತ್ತಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ಜಿಲ್ಲಾಧಿಕಾರಿ ಡಾ. ಶಸಿಕಾಂತ್ ಸೇಂಥಿಲ್, ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಹನುಮಂತರಾಯ, ಎಸಿಪಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಎಸ್.ಎಂ.ಕೃಷ್ಣ ನಿವಾಸಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಬಿ ಎಸ್ ಶಂಕರ್ ಸೇರಿದಂತೆ ಗಣ್ಯರು ಭೇಟಿ ನೀಡಿದ್ದಾರೆ.