ಮೈಸೂರು,ಆಗಸ್ಟ್,11,2022(www.justkannada.in): ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದರು.
ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಮ್ಮೂರು. ಇಲ್ಲಿನ ಪಡುವಾರಹಳ್ಳಿ, ಕಾಳಿದಾಸ ರಸ್ತೆ ಹಾಗೂ ಗಂಗೋತ್ರಿಯಲ್ಲಿ ಓಡಾಡಿದ್ದೇನೆ. ನಮ್ಮೂರಿನಲ್ಲಿ ದೇಶದ ಹೆಮ್ಮೆಯ ಧ್ವಜ ಹಿಡಿಯುವ ಕಾರ್ಯಕ್ರಮ ಆಯೋಜಿಸಿರುವುದರಿಂದ ಬಹಳ ಹೆಮ್ಮೆಯಿಂದ ಬಂದಿದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ. ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ನಾನೇನು ಹೆಚ್ಚು ಬದಲಾಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.
ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನು ಜನರ ಮನೆ ಮುಂದೆ ತರಲು ಸರಕಾರಕ್ಕೂ ಕಷ್ಟಸಾಧ್ಯ. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಹುಚ್ಚು ಆತ್ಮ ವಿಶ್ವಾಸ ಇರಬೇಕು. ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಾ ಅಂತ ಯಾರಾದರೂ ಊಹೆ ಮಾಡಿದ್ರಾ? ನೀವು ಒಳ್ಳೆಯದನ್ನ ಮಾತಾಡ್ತಾ, ಯೋಚನೆ ಮಾಡ್ತಾ ಹೋಗಿ. ತಂತಾನೆ ಅದು ಒಳ್ಳೆಯದಾಗುತ್ತದೆ. ನೀವು ಒಳ್ಳೆಯದು ಮಾಡ್ತಾ ಹೋಗಿ. ನಮ್ಮೊಳಗೆ ಸರ್ಕಾರ ಹುಟ್ಟಬೇಕು. ಪ್ರತಿಯೊಬ್ಬ ತನ್ನ ವೃತ್ತಿಯಲ್ಲಿ ಕಷ್ಟಪಟ್ಟು ಮುಂದೆ ಬರುವ ಮೂಲಕದೇಶದ ಪ್ರಗತಿ ಸಾಧಿಸಬಹುದು. ಹಳ್ಳಿಯ ಮೂಲೆಯಿಂದ ಬೆಳೆಯಬಹುದು. ನಿಮ್ಮಲ್ಲಿ ಸಾಧಿಸುವ ಚಲ ಇದ್ದರೆ ಗೆಲುವು ಸಾಧ್ಯ ಎಂದರು.
ಮಜಾ ಮಾಡಿ, ತುಂಬಾ ಸೀರಿಯಸ್ ಆಗಬೇಡಿ. ಸಣ್ಣ ಸಣ್ಣ ಖುಷಿ ಅನುಭವಿಸಿ. ಫ್ರೆಂಡ್ಸ್ ಜೊತೆ ಸುತ್ತಾಡಿ, ಜೀವನ ಅನುಭವಿಸಿ. ಸಿಎಂ ಹಲವು ಕನಸು ಹೊಂದಿದ್ದಾರೆ. ಅವರ ಕನಸುಗಳೆಲ್ಲ ಈಡೇರಲಿ ಎಂದು ಆಶಿಸುವೆ ಎಂದರು.
ಸಿಎಂ ಜೊತೆ ಬಂದ ಯಶ್
ಇದಕ್ಕೂ ಮುನ್ನ ಯಶ್ ಬೆಂಗಳೂರಿನಿಂದ ಸಿಎಂ ಜೊತೆ ಒಟ್ಟಿಗೆ ಹೆಲಿಕಾಪ್ಟರ್ ನಲ್ಲಿ ಮೈಸೂರಿಗೆ ಬಂದರು. ವಿಮಾನ ನಿಲ್ದಾಣದಿಂದಲೂ ಸಿಎಂ ಜೊತೆಗೆ ಮಹಾರಾಜ ಮೈದಾನಕ್ಕೆ ಆಗಮಿಸಿದರು. ನಟ ಯಶ್ ವೇದಿಕೆ ಏರುತ್ತಿದ್ದಂತೆ ವಿದ್ಯಾರ್ಥಿ ಸಮೂಹ ಶಿಳ್ಳೆ, ಚಪ್ಪಾಳೆ ತಟ್ಟಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಯಾರೇ ಅತಿಥಿ ಭಾಷಣಕ್ಕೆ ನಿಂತರೂ ರಾಕಿ, ರಾಕಿ ಎಂಬ ಘೋಷಣೆ ಕೂಗುತ್ತಿದ್ದರು. ವಿದ್ಯಾರ್ಥಿಗಳ ಉತ್ಸಾಹದಿಂದ ಪ್ರೇರೇಪಿತರಾದ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ತಮ್ಮ ಭಾಷಣದ ಮೇಲೆ ಯಶ್ ಅವರನ್ನು ಹೊಗಳಿದರು. ಯಶ್ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಮಾತ್ರವಲ್ಲ. ಅವರು ಯುವಕರ ಐಕಾನ್. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಅವರ ಕಡೆ ತಿರುಗಿ ನೋಡಿದೆ. ಕೆಜಿಎಫ್ 1, ಕೆಜಿಎಫ್ 2 ಚಿತ್ರಗಳ ಯಶಸ್ಸಿನ ಮೂಲಕ ಇಡೀ ದೇಶಕ್ಕೆ ಅವರು ರಾಕಿಂಗ್ ಸ್ಟಾರ್ ಆಗಿದ್ದಾರೆ. ಕನ್ನಡ, ಕನ್ನಡತನವನ್ನು ಇಡೀ ದೇಶದಾದ್ಯಂತ ಯಶ್ ಪಸರಿಸಿದ್ದಾರೆ. ಅವರಂತೆ ನೀವು ಆಗಬೇಕು. ಆತ್ಮವಿಶ್ವಾಸ ಇದ್ದರೆ ಯಾರು ಏನು ಬೇಕಾದರೂ ಆಗಬಹುದು ಎಂದರು.
Key words: small -change – life – lead – big success- Actor -Rocking Star -Yash.
ENGLISH SUMMARY…
A small change could lead you to huge success: Actor Yash
Mysuru, August 11, 2022 (www.justkannada.in): “A small change can bring a huge success in your lives. If you have self-confidence you can achieve whatever you like,” observed sandalwood’s rocking star Yash.
He participated in the Yuvjana Mahotsav organized by the University of Mysore, held at the Maharaja College grounds in Mysuru today. “Mysuru is my native place. I have roamed on the roads in Paduvarahalli, Kalidasa Road, and Gangotri. I feel very proud to see that the program of holding our respectable national flag has been organized in my native town. I couldn’t bring happiness to my parents as a student. However, a small change can bring a lot of success in our lives. I have not changed much. Even today I am the same old Yash,” he said.
“We are celebrating India’s 75th Independence Day today. I request everyone to know about the various plans and programs of the government and utilize the benefits. It is also very difficult for the government to reach out to every benefit to the people individually. I wish all of you live happily in your lives and keep laughing daily. Please don’t miss any moment that gives you happiness,” he added.
Keywords: Yuvajana Mahotsav/ Yash/ success/ small change