ಬೆಂಗಳೂರು,ನವೆಂಬರ್,21,2020(www.justkannada.in): ನಾವು ನಿರ್ಮಿಸುವ ಭವಿಷ್ಯದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿಗಳಲ್ಲಿ ಡೆನ್ಮಾರ್ಕ್ ಮಾದರಿಯ ಮುಕ್ತ ಶಾಲೆಗಳು (ಓಪನ್ ಸ್ಕೂಲ್) ಕಾರ್ಯರೂಪಕ್ಕೆ ಬಂದರೆ ಮುಂದಿನ ತಲೆಮಾರಿನಲ್ಲಿ ಸ್ಪರ್ಧಾತ್ಮಕ ಹಾಗೂ ಚಲನಶೀಲ ನಾಯಕತ್ವವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ತಜ್ಞ ಹಾಗೂ ಚಮನ್ ಭಾರತೀಯ ಸ್ಕೂಲ್ ನ ಮುಖ್ಯಸ್ಥ ಅಲನ್ ಕೆ. ಆಂಡರ್ಸನ್ ಅಭಿಪ್ರಾಯಪಟ್ಟರು.
ಬೆಂಗಳೂರು ತಂತ್ರಜ್ಞಾನ ಮೇಳದಲ್ಲಿ ಸ್ಮಾರ್ಟ್ ಸಿಟಿ ಮತ್ತು ನಗರ ಸುಸ್ಥಿರತೆ ಕುರಿತ ವರ್ಚುವಲ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸ್ಮಾರ್ಟ್ ಸಿಟಿಗಳಲ್ಲಿ ಸುಖಕರವಾದ ಜೀವನ, ಉತ್ತಮ ಪರಿಸರ, ಸುಸ್ಥಿರ ಬದುಕಿನ ಬಗ್ಗೆ ಯೋಚನೆ ಮಾಡುವ ನಾವು ನಮ್ಮ ಮುಂದಿನ ತಲೆಮಾರಿನ ಶಿಕ್ಷಣದ ಬಗ್ಗೆಯೂ ಚಿಂತಿಸಬೇಕಾಗಿದೆ. ಓಪನ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಹೊರಗಿನ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಮಕ್ಕಳು ಹೊರಗಿನ ವಾತಾವರಣಕ್ಕೆ ಹೆಚ್ಚು ತೆರೆದುಕೊಳ್ಳುತ್ತಾ ಹೋಗುತ್ತಾರೆ ಎಂದು ಆಂಡರ್ಸನ್ ವಿವರಿಸಿದರು.
ತಂತ್ರಜ್ಞಾನದ ಭದ್ರತೆ ಮತ್ತು ಸ್ಥಳೀಯ ಸಮುದಾಯದ ಸಹಕಾರದಿಂದ ಇಂತಹುದೊಂದು ಪರಿಕಲ್ಪನೆಯನ್ನು ಸಾಧ್ಯವಾಗಿಸಬಹುದು. ಮಾನವೀಯ ಸ್ಪರ್ಶವನ್ನು ಹೊಂದಿರುವ ಶಿಕ್ಷಣ ಯಾವತ್ತೂ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲಿದೆ ಎಂದರು.
ನೋವೋ ನಾರ್ಡಿಸ್ಕ್ ಸಂಸ್ಥೆಯ ಕಾರ್ಪೋರೇಟ್ ಉಪಾಧ್ಯಕ್ಷೆ ಲೀನೇ ಹೈಲಿಂಗ್ ಅಕ್ಸೆಲ್-ಸನ್ ಮಾತನಾಡಿ, ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಭಾರತಲ್ಲಿ ಮಧುಮೇಹಿ ರೋಗಿಗಳ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಗಲಿದೆ, ಆ ಬಗ್ಗೆ ನಮ್ಮ ಸ್ಥಳೀಯ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ ಎಂದರು.
ಸ್ಮಾರ್ಟ್ ಸಿಟಿಗಳನ್ನು ನಿರ್ಮಾಣ ಮಾಡುವ ಹೊತ್ತಿನಲ್ಲಿ ಆರೋಗ್ಯ ವಲಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಈಗ ಕಾಣಿಸಿಕೊಂಡಿರುವ ಕೋವಿಡ್ ಸಾಂಕ್ರಾಮಿಕವು ವರವಾಗಿ ಪರಿಣಮಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಇದರಿಂದ ಸಾಧ್ಯವಾಗಿದೆ ಎಂದು ಲೀನೆ ತಿಳಿಸಿದರು.
ಕರ್ನಾಟಕದ ಕೆ.ಯು.ಐ.ಡಿ.ಎಫ್.ಸಿಯ ಆಡಳಿತ ನಿರ್ದೇಶಕಿ ಚಾರುಲತಾ ಅವರು ಮಾತನಾಡಿ, ಸ್ಮಾರ್ಟ್ ಸಿಟಿಯ ನಿರ್ಮಾಣದಲ್ಲಿ ಎಲ್ಲ ಸಂಸ್ಥೆಗಳು, ಎಲ್ಲ ಹಕ್ಕುದಾರರ ನಡುವೆ ಉತ್ತಮ ಸಮನ್ವಯ ಇದ್ದರಷ್ಟೇ ನಮ್ಮ ಮಹತ್ವಾಕಾಂಕ್ಷಿ ಯೋಜನೆಗಳು ಸಾಕಾರಗೊಳ್ಳಲು ಸಾಧ್ಯ ಎಂದರು.
ಸ್ಮಾರ್ಟ್ ಸಿಟಿ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರವಿ ಸುಂದರ್ ರಾಜನ್, ಅಖಿಲೇಶ್ ಮಿಶ್ರಾ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.
Key words: Smart City- needs – open school-Education –expert-alen K. Anderson